ಶಿಕ್ಷಣದ ವ್ಯಾಪಾರೀಕರಣ: ಆಪ್ ಕಳವಳ
ಮಂಗಳೂರು: ಪ್ರಾಥಮಿಕ ಶಿಕ್ಷಣದ ವ್ಯಾಪಾರೀಕರಣ ಮತ್ತು ಸರ್ಕಾರಿ ಶಾಲೆಗಳ ವ್ಯವಸ್ಥಿತ ಕುಸಿತಕ್ಕೆ ಆಮ್ ಆದ್ಮಿ ಪಕ್ಷ ಕಳವಳ ವ್ಯಕ್ತಪಡಿಸಿದೆ.
ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಶಿಕ್ಷಣ ವ್ಯವಸ್ಥೆಯ ವ್ಯಾಪಾರೀಕರಣ ತಡೆಯಲು ಸರಕಾರ ಮಧ್ಯಪ್ರವೇಶ ಮಾಡಬೇಕೆಂದರು.
2026-27ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಖಾಸಗಿ ಶಾಲೆಗಳು ನಿಯಂತ್ರಣವಿಲ್ಲದ ವಿವಿಧ ಮೂಲಗಳ ಮೂಲಕ ಪೋಷಕರಿಂದ ಗಗನಚುಂಬಿ ಶುಲ್ಕವನ್ನು ವಸೂಲಿ ಮಾಡಿ ಶೋಷಿಸುತ್ತಿವೆ. ಇದರಿಂದಾಗಿ ಗುಣಮಟ್ಟದ ಶಿಕ್ಷಣವು ಕೇವಲ ಶ್ರೀಮಂತರ ಪಾಲಿನ ಐಷಾರಾಮಿ ವಸ್ತುವಾಗಿ ಮಾರ್ಪಟ್ಟಿದೆ.
ಸರ್ಕಾರದ ’ಬೇಟಿ ಬಚಾವೋ ಬೇಟಿ ಪಢಾವೋ’ ಮತ್ತು ’ಸರ್ವ ಶಿಕ್ಷಾ ಅಭಿಯಾನ’ದಂತಹ ಭವ್ಯ ಘೋಷಣೆಗಳಿಗೂ ಹಾಗೂ ವಾಸ್ತವ ಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಎಎಪಿ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ನುರಿತ ಶಿಕ್ಷಕರ ಕೊರತೆಯಿಂದಾಗಿ, ಅನಿವಾರ್ಯವಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ. ವಾರ್ಷಿಕ 2.5 ಲಕ್ಷ ಅದಾಯವಿರುವ ಸಾಮಾನ್ಯ ನಾಗರಿಕನ ಗಳಿಕೆಯ ಬಹುದೊಡ್ಡ ಭಾಗವು ಮಕ್ಕಳ ಶಾಲಾ ಶುಲ್ಕಕ್ಕೇ ಖರ್ಚಾಗುತ್ತಿದ್ದು, ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಉಚಿತ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದ್ದರೆ, ಭಾರತದ ಪ್ರಸ್ತುತ ವ್ಯವಸ್ಥೆಯು ತಾರತಮ್ಯದಿಂದ ಕೂಡಿದ್ದು, ಬಡವ ಮತ್ತು ಶ್ರೀಮಂತರ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದರು.
ಪಕ್ಷದ ಮುಖಂಡರಾದ ಎಸ್. ಆರ್. ಲೋಬೊ, ಸೀಮಾ ಮಡಿವಾಳ, ಎಸ್. ಎಲ್. ಪಿಂಟೊ, ವಾಸುದೇವ್, ನಜೀರ್ ಅಹಮೆದ್ ಬಾವ ಶಾಲೆಟ್ ಪಿಂಟೊ ಉಪಸ್ಥಿತರಿದ್ದರು.