ರಾಜ್ಯದ ಪ್ರಜೆಗಳನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿರುವುದೇ ಸರಕಾರದ ಸಾಧನೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪ
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಎಂ ಆವಾಜ್ ಯೋಜನೆಯಡಿ 6.38 ಲಕ್ಷ ಮನೆಗಳು ಮಂಜೂರಾಗಿದ್ದು, 2.5 ಲಕ್ಷ ಮನೆಗಳು ಅಪೂರ್ಣವಾಗಿವೆ. ಕ್ಷೀರಧಾರೆ ಯೋಜನೆಯಡಿ ಕಳೆದ 9 ತಿಂಗಳಿನಿಂದ 800 ಕೋಟಿರೂ. ಸಬ್ಸಿಡಿ ಹಣವನ್ನು ಹೈನುಗಾರರಿಗೆ ಬಾಕಿ ಇರಿಸಲಾಗಿದೆ. 15,000 ಕೋಟಿ ರೂ. ಕಾರ್ಪಸ್ ನಿಽಯನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಯಾವ ಉದ್ದೇಶವೆಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಸಿದ್ಧರಾಮಯ್ಯನವರು ಇಷ್ಟು ವರ್ಷಗಳ ಕಾಲ ರಾಜಕೀಯ ಮಾಡಿದ್ದರೂ ತಮ್ಮ ಕೊನೆಯ ಅವಧಿಯಲ್ಲಿ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಅರ್ಥ ಆಗುತ್ತಿಲ್ಲ ಎಂದರು.
ದೇಶದ ಹಾಟ್‌ಸ್ಪಾಟ್ ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕವನ್ನು ಅಸಾಧಾರಣ ಪ್ರಯತ್ನದಿಂದ ಋಣಭಾರವಾಗಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಮೂರು ವರ್ಷಗಳ ಸಾಧನೆ ಎಂದ ಅವರು ಹಿಂದಿನ ಬೊಮ್ಮಾಯಿ ಸರಕಾರದ ಆಡಳಿತದಲ್ಲಿ ಕರ್ನಾಟಕ ಆರ್ಥಿಕ ಶಿಸ್ತಿಗೆ ಹೆಸರುವಾಸಿಯಾಗಿತ್ತು. ಅಂತಹ ರಾಜ್ಯವಿಂದು ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವುದನ್ನು ಸಿಎಜಿ ವರದಿಯೇ ಹೇಳುತ್ತಿದೆ. ಈ ಬಗ್ಗೆ ಸಾಧನಾ ಸಮಾವೇಶ ನಡೆಸುತ್ತಿರುವ ರಾಜ್ಯ ಸರಕಾರ ಉತ್ತರಿಸಬೇಕಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ ಎಂದು ಹೇಳಿದ ಅವರು, ಆರೋಗ್ಯ ಇಲಾಖೆಯೂ ಸಿಎಸ್‌ಆರ್‌ನ 25 ಕೋಟಿ ರೂ.ಗಳಲ್ಲಿ ನಡೆಸುವಂತಾಗಿದೆ. ವೇತನ ನೀಡುವುದಿಲ್ಲ. ಹೊಸ ನೇಮಕಾತಿ ಮಾಡುತ್ತಿಲ್ಲ. ಒಟ್ಟಿನಲ್ಲಿ ರಾಜ್ಯವನ್ನು ಕಾಂಗ್ರೆಸ್ ಎಟಿಎಂ ರೀತಿ ಬಳಸಿಕೊಂಡು ರಾಜ್ಯದ ಜನರನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರದ ಅಲ್ಪಸಂಖ್ಯಾತ ಕಾಲನಿ ನಿಧಿ ಪರಿಪಾಠವು ಅಂಬೇಡ್ಕರ್ ತತ್ವಗಳಿಗೆ ತಿಲಾಂಜಲಿ ನೀಡುವ ಪ್ರಕ್ರಿಯೆ ಎಂದು ಟೀಕಿಸಿದ ಅವರು, ಈ ಎಲ್ಲಾ ವಿಷಯಗಳನ್ನು ಮುಂದಿಟ್ಟು ಬಿಜೆಪಿ ಜನಾಭಿಪ್ರಾಯವನ್ನು ಸೃಷ್ಟಿಸಲಿದೆ ಎಂದರು.
ತಮ್ಮ ಮಾತಿನ ವೇಳೆ ಸಚಿವ ಪ್ರಿಯಾಂಕ್ ಖರ್ಗೆಯನ್ನು ಉಲ್ಲೇಖಿಸಿದ ಕ್ಯಾ. ಬ್ರಿಜೇಶ್ ಚೌಟ, ಅವರಂತೆ ಪ್ರತಿಯೊಂದಕ್ಕೂ ಟ್ವೀಟ್ ಮಾಡಿಕೊಂಡು ನಾನು ರಾಜಕೀಯ ಮಾತನಾಡುವುದಿಲ್ಲ. ಪ್ರಿಯಾಂಕ್ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸಾಧನೆ ಅವರ ಕ್ಷೇತ್ರಗಳಲ್ಲಿನ ಅಭಿವೃದ್ಧಿಯಿಂದಲೇ ತಿಳಿಯುತ್ತದೆ ಎಂದು ಹೇಳಿದರು.
ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಜನರ ಮೇಲಾಗುತ್ತಿರುವ ಪರಿಣಾಮದ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕ್ಯಾ. ಬ್ರಿಜೇಶ್ ಚೌಟ, ಅದು ಏಕಾಏಕಿಯಾಗಿ ಏರಿಸಿದ್ದಲ್ಲ. ಪ್ರಜ್ಞಾವಂತ ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಜಾಗತಿಕವಾಗಿ ತಲೆದೋರಿರುವ ಸಮಸ್ಯೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣಗಿದ್ದು, ಇದು ಸದ್ಯ ಸವಾಲಿನದ್ದಾಗಿದ್ದರೂ ಅದನ್ನು ಸರಿದೂಗಿಸುವ ಕೆಲಸ ನಡೆಯುತ್ತಿದೆ ಎಂದರು.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಗ್ಯಾರಂಟಿ ಯೋಜನೆಗಳ ಕುರಿತ ಪ್ರಶ್ನೆಗೆ, ಯಾವುದೇ ಯೋಜನೆಗಳ ವಿರೋಧಿ ನಾವಲ್ಲ. ಆದರೆ ರಾಜ್ಯದಲ್ಲಿ ತಪ್ಪು ಆರ್ಥಿಕ ನಿರ್ವಹಣೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಸಾಲ ಮಾಡಿಕೊಂಡರೂ ಯಾವುದೇ ಆಸ್ತಿ ಸೃಷ್ಟಿಯಾಗದೆ ಕರ್ನಾಟಕ ಡೋಲಾಯಮಾನ ಪರಿಸ್ಥಿತಿಗೆ ಬಂದು ನಿಂತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಂತಿ ಪ್ರಸಾದ್, ಸುಜಿತ್ ಪ್ರತಾಪ್, ಡಾ. ಮಂಜುಳಾ ರಾವ್, ಸಂಜಯ್ ಪ್ರಭು, ಅರುಣ್ ಶೇಟ್, ರಾಜ್‌ಗೋಪಾಲ್ ರೈ, ಜೀವನ್, ದೊಂಬಯ್ಯ, ಹೇಮಂತ್ ಶೇಟ್, ಕದ್ರಿ ಮನೋಹರ್ ಶೆಟ್ಟಿ, ಮಾಧವ ಮಾವೆ ಉಪಸ್ಥಿತರಿದ್ದರು.