ಕರಾವಳಿಯಲ್ಲಿ ಗುಡುಗು ಸಹಿತ ಮಳೆಗೆ ಮುನ್ಸೂಚನೆ
ಮಂಗಳೂರು: ಮಂಗಳೂರು ಹಾಗೂ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿದ್ದ ಬಿಸಿಲಿನ ವಾತಾವರಣದ ನಡುವೆಯೇ, ಇದೀಗ ಹವಾಮಾನದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುತ್ತಿವೆ. ಸೋಮವಾರ ಕರಾವಳಿಯ ಬಹುತೇಕ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಧ್ಯಾಹ್ನದ ನಂತರ, ಸಂಜೆ ಹಾಗೂ ರಾತ್ರಿಯ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಸ್ತುತ ಹವಾಮಾನ ಮುನ್ಸೂಚನೆಯ ಪ್ರಕಾರ, ಮೇ 19 ಅಥವಾ 20 ರಿಂದ ಅರಬ್ಬಿ ಸಮುದ್ರದ ಕಡೆಯಿಂದ ಮುಂಗಾರು ಮಾದರಿಯ ಮಾರುತಗಳ ಚಲನೆ ಆರಂಭವಾಗುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಇದು ನೈರುತ್ಯ ಮುಂಗಾರು ಪ್ರವೇಶದ ಆರಂಭಿಕ ಪ್ರಕ್ರಿಯೆಯಾಗಿದ್ದರೂ, ಆರಂಭದಲ್ಲಿ ಮಳೆಯ ತೀವ್ರತೆ ಕೊಂಚ ದುರ್ಬಲವಾಗಿರುವ ಸಾಧ್ಯತೆಗಳಿವೆ.
ಬಂಗಾಳಕೊಲ್ಲಿಯ ಮಾರುತಗಳ ಪ್ರಭಾವ
ಅರಬ್ಬಿ ಸಮುದ್ರದಲ್ಲಿ ಮೇ 19ರ ಸುಮಾರಿಗೆ ಸೃಷ್ಟಿಯಾಗಲಿರುವ ಸಣ್ಣ ಪ್ರಮಾಣದ ಸುಳಿಗಾಳಿ ಅಥವಾ ತಿರುಗುವಿಕೆಯು ಮುಂಗಾರು ಮಾರುತಗಳ ಮುನ್ನಡೆಗೆ ತಾತ್ಕಾಲಿಕವಾಗಿ ಸ್ವಲ್ಪ ತೊಡಕನ್ನು ಉಂಟುಮಾಡುವ ಸಾಧ್ಯತೆಯಿದೆ. ಆದರೆ, ಇದೇ ಅವಧಿಯಲ್ಲಿ ಬಂಗಾಳಕೊಲ್ಲಿಯ ಕಡೆಯಿಂದ ತಮಿಳುನಾಡು ಕರಾವಳಿಯ ಮೂಲಕ ಭಾರತದ ಒಳಭಾಗಕ್ಕೆ ನುಗ್ಗಲಿರುವ ಮಾರುತಗಳು ಕರಾವಳಿಯ ರಕ್ಷಣೆಗೆ ಬರಲಿವೆ. ಈ ಗಾಳಿಯು ತಮಿಳುನಾಡಿನಿಂದ ಒಳ ನುಗ್ಗಿದ ನಂತರ ತನ್ನ ದಿಕ್ಕನ್ನು ಬದಲಾಯಿಸಿ, ಈಶಾನ್ಯ ದಿಕ್ಕಿನ ಕಡೆಗೆ ಸಾಗಲಿದೆ. ಈ ವಾತಾವರಣದ ಬದಲಾವಣೆಯು ನೈರುತ್ಯ ಮುಂಗಾರು ಮಾರುತಗಳು ಕರಾವಳಿ ಹಾಗೂ ಕೇರಳದ ಮೂಲಕ ದೇಶದೊಳಗೆ ಸುಲಭವಾಗಿ ಸಾಗಿ ಬರಲು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲಿ ಗುಡುಗು ಮತ್ತು ಸಿಡಿಲಿನ ಆರ್ಭಟ ಹೆಚ್ಚಿರುವುದರಿಂದ, ಕರಾವಳಿಯ ಜನತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಹಾಗೂ ಸಂಜೆ ವೇಳೆಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಕೋರಲಾಗಿದೆ. ಮೀನುಗಾರರಿಗೂ ಸಮುದ್ರದ ಗಾಳಿಯ ವೇಗದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ದಿನವಿಡಿ ಮೋಡ ಕವಿದ ವಾತಾವರಣ
ಕರಾವಳಿಯಲ್ಲಿ ಬಹುತೇಕ ಕಡೆಯಲ್ಲಿ ಇಡೀ ದಿನ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಚಾರ್ಮಾಡಿ ಹಾಗೂ ಸುಳ್ಯ ಭಾಗದಲ್ಲಿ ಅಲ್ಪ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಪೂರ್ವ ಮುಂಗಾರು ಜಿಲ್ಲೆಯಲ್ಲಿ ಚುರುಕು ಕಂಡಿದ್ದು, ಎಲ್ಲೆಡೆ ಸಾಧಾರಣದಿಂದ ಉತ್ತಮ ಮಳೆ ದಾಖಲಾಗಿತ್ತು. ಮಂಗಳೂರು ನಗರ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆ ತನಕನೂ ಮೋಡ ಕವಿದ ವಾತಾವರಣವೇ ಹೆಚ್ಚು ಕಾಣಿಸಿಕೊಂಡಿದ್ದು, ಸಂಜೆ ಹೊತ್ತು ಸಾಧಾರಣ ಗಾಳಿ ಸಹಿತ ಗುಡಡುಗು ಕಾಣಿಸಿಕೊಂಡಿದೆ. ಪೂರ್ವ ಮುಂಗಾರು ಮಳೆ ಚುರುಕಾದ ಬೆನ್ನೆಲ್ಲೇ ಭಾರತೀಯ ಹವಾಮಾನ ಇಲಾಖೆ ವಾರವಿಡೀ ಕರಾವಳಿ ಭಾಗದಲ್ಲಿ ಮಳೆಯ ಸೂಚನೆ ನೀಡಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಮುಂಗಾರು ಮಾರುತಗಳಿಂದ ಮಳೆಯಾಗಲಿದ್ದು, ಇದಕ್ಕೆ ಪೂರಕವಾಗಿ ಪೂರ್ವ ಮುಂಗಾರಿನ ಮಳೆ ಇಳೆಯನ್ನು ತಣಿಸುವ ಕೆಲಸ ಮಾಡುತ್ತಿದೆ.