ವೈಜ್ಞಾನಿಕ ಕನಿಷ್ಠ ಕೂಲಿಗಾಗಿ, ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಚೇರಿ ಚಲೋ
Saturday, May 30, 2026
ಮಂಗಳೂರು: ವೈಜ್ಞಾನಿಕ ಕನಿಷ್ಠ ಕೂಲಿಗಾಗಿ, ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ರಾಜ್ಯ ಸರ್ಕಾರ ಪ್ರಕಟಿಸಿದ ಕನಿಷ್ಠ ಕೂಲಿಯ ಜಾರಿಗಾಗಿ, ಬೀಡಿ, ಗೋಡಂಬಿ ಹಾಗೂ ಸ್ಕೀಮ್ ಕಾರ್ಮಿಕರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ಸೇರಿಸಲು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯಾದ್ಯಂತ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಚಲೋ ಕಾರ್ಯಕ್ರಮ ನಡೆಸಬೇಕೆಂದು CITU ನೀಡಿದ ಕರೆಯ ಮೇರೆಗೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಚಲೋ ಕಾರ್ಯಕ್ರಮವನ್ನು ನಡೆಸಲಾಯಿತು. 300 ಕ್ಕೂ ಮಿಕ್ಕಿದ ವಿವಿಧ ವಿಭಾಗದ ಕಾರ್ಮಿಕರು ಕಾರ್ಮಿಕ ಕಾನೂನುಗಳನ್ನು ಹಾಗೂ ಕನಿಷ್ಠ ಕೂಲಿಯ ಪ್ರಶ್ನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಿದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುವ ಮೂಲಕ ನಾಗುರಿ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ CITU ದ.ಕ. ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಅವರು, ಕರ್ನಾಟಕ ರಾಜ್ಯ ಸರ್ಕಾರವು ಕನಿಷ್ಠ ವೇತನವನ್ನು ಮೇ 22ರಂದು ಪರಿಷ್ಕರಿಸಿದ್ದರೂ ಪ್ರತೀ ಉದ್ದಿಮೆಗೆ ಪ್ರತ್ಯೇಕವಾಗಿ ಕನಿಷ್ಠ ವೇತನ ನಿಗದಿ ಮಾಡದೆ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಮಾಡಿರುವುದು ಸರಿಯಲ್ಲ. ವಾಸ್ತವ ಪರಿಸ್ಥಿತಿಯನ್ನು ಹಾಗೂ ಬೆಲೆಯೇರಿಕೆಯನ್ನು ಗಮನದಲ್ಲಿಟ್ಟು ಸುಪ್ರೀಂ ಕೋರ್ಟಿನ ಐತಿಹಾಸಿಕ ರೆಪ್ತಕೋಸ್ ಪ್ರಕರಣದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನವನ್ನು ಪರಿಷ್ಕರಿಸಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ದೇಶದ ಕಾರ್ಮಿಕ ವರ್ಗ ಬೆವರು ಬಸಿದು ರಚಿಸಿದ ಕಾರ್ಮಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಏಕಾಏಕಿಯಾಗಿ ರದ್ದುಗೊಳಿಸಿ ಸಂಹಿತೆಗಳನ್ನಾಗಿ ರೂಪಿಸಿದ್ದು ತೀರಾ ಕಾರ್ಮಿಕ ವಿರೋಧಿಯಾಗಿದ್ದು, ಅವುಗಳು ಸಂಪೂರ್ಣವಾಗಿ ದೇಶದ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದೆ.ನವಗುಲಾಮಗಿರಿಗೆ ದೂಡುವ ಕೇಂದ್ರ ಸರಕಾರದ ಈ ಹುನ್ನಾರವನ್ನು ಬಯಲಿಗೆಳೆಯುವ ಮೂಲಕ ಕಾರ್ಮಿಕ ವರ್ಗದ ಬದುಕನ್ನು ಸಂರಕ್ಷಿಸಲು ಧೀರೋದಾತ್ತವಾದ ಹೋರಾಟವನ್ನು ನಡೆಸಬೇಕೆಂದು ಕರೆ ನೀಡಿದರು.
ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ವಸಂತ ಆಚಾರಿ ಮಾತನಾಡಿ, ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯಿಂದ ಬೀಡಿ, ಗಾರ್ಮೆಂಟ್ಸ್,ಅಗರಬತ್ತಿ ಸೇರಿದಂತೆ 19 ವಿಭಾಗದ ಕಾರ್ಮಿಕರನ್ನು ಹೊರಗಿಟ್ಟಿರುವುದಲ್ಲದೆ ಬಿಸಿಯೂಟ,ಅಂಗನವಾಡಿ, ಆಶಾ ಸೇರಿದಂತೆ ಸ್ಕೀಮ್ ಕಾರ್ಮಿಕರನ್ನೂ ಕೂಡ ಕನಿಷ್ಠ ಕೂಲಿ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿದರು.
ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ದುಡಿಯುವ ಮಹಿಳೆಯರ ನಾಯಕಿ ಜಯಂತಿ ಶೆಟ್ಟಿ, CITU ಜಿಲ್ಲಾ ಕೋಶಾಧಿಕಾರಿಗಳಾದ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ದ.ಕ. ಜಿಲ್ಲೆಯಲ್ಲಿ ರೈತ ಕಾರ್ಮಿಕರ ಹಾಗೂ ಜನಸಾಮಾನ್ಯರ ಹೋರಾಟಗಳನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ರೂಪಿಸುವ ಆಳುವ ವರ್ಗಗಳ ಹುನ್ನಾರಗಳನ್ನು ಬಯಲಿಗೆಳೆದರು ಹಾಗೂ ಜನಸಾಮಾನ್ಯರ ಅಹವಾಲನ್ನು ಸ್ವೀಕರಿಸಬೇಕಾದ ಜಿಲ್ಲಾಧಿಕಾರಿಗಳು ಯಾರೂ ಕೂಡ ತಮ್ಮ ಕಚೇರಿಯ ಎದುರು ಪ್ರತಿಭಟನೆ ನಡೆಸಲೇಬಾರದೆಂಬ ಫಾರ್ಮಾನು ಹೊರಡಿಸಿರುವ ಜಿಲ್ಲಾಧಿಕಾರಿಗಳ ದುರಂಹಕಾರದ ಕ್ರಮವನ್ನು ಖಂಡಿಸಲಾಯಿತು.
ಪ್ರತಿಭಟನೆ ಮುಗಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯತ್ತ ಒಂದೆರಡು ಹೆಜ್ಜೆಗಳನ್ನು ಇಡುವಾಗಲೇ ಪ್ರತಿಭಟನಾಕಾರರನ್ನು ತಡೆಹಿಡಿಯಲಾಯಿತು. ಬಳಿಕ ಪ್ರಮುಖ ನಾಯಕರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು. ಅಲ್ಲಿಂದ CITUನ ಉನ್ನತ ಮಟ್ಟದ ನಿಯೋಗವೊಂದು ಜಿಲ್ಲಾಧಿಕಾರಿಗಳ ಕಚೇರಿಯತ್ತ ಧಾವಿಸಿ ಮನವಿಯನ್ನು ನೀಡಲಾಯಿತು.
ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಅಭಿಷೇಕ್ ಬೆಳ್ತಂಗಡಿ, SFI ಜಿಲ್ಲಾ ಕಾರ್ಯದರ್ಶಿ ವಿನುಷ ರಮಣ ಅವರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರೋಹಿದಾಸ್, ರವಿಚಂದ್ರ ಕೊಂಚಾಡಿ, ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ರಾಧಾ ಮೂಡುಬಿದಿರೆ, ಈಶ್ವರಿ ಪದ್ಮುಂಜ, ಜಯಂತ ನಾಯಕ್, ಪ್ರಮೋದಿನಿ, ದಿನೇಶ್ ಶೆಟ್ಟಿ, ಜಯಲಕ್ಷ್ಮಿ, ಭಾರತಿ, ಭವಾನಿ, ಹೊನ್ನಯ್ಯ ಅಮೀನ್, ಯಶೋಧಾ, ಗಿರಿಜಾ, ವಾರಿಜಾ, ಲಕ್ಷ್ಮಿ ಮೂಡುಬಿದಿರೆ, ಪದ್ಮಾವತಿ, ಜಯಶ್ರೀ, ಸಂತೋಷ್ ಆರ್.ಎಸ್., ಮುಝಾಫರ್ ಅಹಮದ್, ರಫೀಕ್ ಹರೇಕಳ, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.






