ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯ ಸರಕಾರದಿಂದ ಹಸಿರು ನಿಶಾನೆ
ತನ್ನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೈಕೋರ್ಚ್‌ನ ಮುಖ್ಯ ನ್ಯಾಯಾಧೀಶರಿಗೆ ಈ ಬಗ್ಗೆ ಸಲ್ಲಿಸಿರುವ ಪತ್ರದ ಪ್ರತಿಯೊಂದಿಗೆ ಮಾಹಿತಿ ನೀಡಿದರು.
ಹೈಕೋಟ್‌ನ ಮುಖ್ಯ ನ್ಯಾಯಾಧೀಶರ ನಿಯೋಗ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ತಿಳಿಸಿರುವಂತೆ ಇಲ್ಲಿ ಲಭ್ಯ ಇರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲಿದೆ. ಸಂಚಾರಿ ಪೀಠ ಸ್ಥಾಪಿಸಲು ಅಗತ್ಯವಾದ ಎಲ್ಲಾ ಇತರ ಸೌಲಭ್ಯಗಳನ್ನು ಕೂಡಾ ಒದಗಿಸಲು ಸಿದ್ಧ ಇರುವುದಾಗಿ ಮುಖ್ಯಮಂತ್ರಿಯವರು ಪತ್ರದಲ್ಲಿ ತಿಳಿಸಿರುವ ಕಾರಣ ಅಕ್ಟೋಬರ್ ಒಳಗೆ ಸಂಚಾರಿ ಪೀಠ ಕಾರ್ಯಾರಂಭ ಆಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.
ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಹಳೆ ಜಿಲ್ಲಾಧಿಕಾರಿ ಕಚೇರಿಯ 50,000 ಚದರ ಅಡಿ ಕಟ್ಟಡ ಸದ್ಯ ಸಂಚಾರಿ ಪೀಠ ಆರಂಭಿಸಲು ಸೂಕ್ತವಾಗಿದೆ. ನ್ಯಾಯಾಧೀಶರಿಗೆ ವಸತಿ
ಸೌಲಭ್ಯ ಒದಗಿಸಲು ಐಎಎಸ್ ಅಧಿಕಾರಿಗಳಿಗಾಗಿ ನಿರ್ಮಾಣವಾಗಿರುವ ಕ್ವಾಟರ್ಸ್‌ಗಳ ಜಾಗದಲ್ಲಿ ನಿವೇಶನವನ್ನು ಗುರುತಿಸಲಾಗಿದೆ. ಪೀಠವು ಯಾವುದೇ ಅಡೆತಡೆಗಳಿಲ್ಲದೆ ಕಾರ್ಯ ನಿರ್ವಹಿಸಲು ಅಗತ್ಯವಾದ ಆಡಳಿತಾತ್ಮಕ ಹಾಗೂ ಇತರ ಕಚೇರಿ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಹಳೆ ಜಿಲ್ಲಾಧಿಕಾರಿ ಕಚೇರಿಯ ನವೀಕರಣ ಹಾಗೂ ನ್ಯಾಯಾಧೀಶರಿಗೆ ಅಗತ್ಯ ವಸತಿ ಸೌಕರ್ಯಗಳನ್ನು ಪಿಡಬ್ಲ್ಯುಡಿ ಇಲಾಖೆಯ ಮೂಲಕ ನಿರ್ವಹಿಸಲು ಕೋರಲಾಗಿದೆ. ಮುಂದಿನ ವಾರ ಪಿಡಬ್ಲ್ಯುಡಿ ಸಚಿವರನ್ನು ಭೇಟಿಯಾಗಿ ಖರ್ಚು ವೆಚ್ಚದ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.
ಕರಾವಳಿ ಜಿಲ್ಲೆಗಳನ್ನು (ದ.ಕ, ಉಡುಪಿ, ಉ.ಕ.) ಒಳಗೊಂಡು ಈ ಸಂಚಾರಿ ಪೀಠ ಸ್ಥಾಪನೆಯಾಗಲಿದೆ. ಮುಂದೆ ಶಾಶ್ವತ ಪೀಠವೂ ಸ್ಥಾಪನೆಯಾಗುವ ಭರವಸೆ ಇದೆ. ಅದಕ್ಕಾಗಿ ಈಗಾಗಲೇ ಮುಡುಪಿವಿಗೆ ಸ್ಥಳಾಂತರಗೊಳ್ಳಲಿರುವ ಮಂಗಳೂರು ಜೈಲಿನ ಸುಮಾರು 12 ಎಕರೆ ಪ್ರದೇಶ ಲಭ್ಯವಿದೆ. ಇದು ನಗರ ಭಾಗದಲ್ಲೇ ಇರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಲ್ಕಿಯಲ್ಲಿ 140 ಎಕರೆ ಭೂಮಿಯೂ ಕೆಐಎಡಿಬಿಯಡಿ ಲಭ್ಯವಿದೆ. ನಗರದಲ್ಲಿ ಮಾಡುವುದಾದರೆ ಸುಮಾರು 10 ಎಕರೆ ಭೂಮಿ ಸಾಕಾಗಬಹುದು ಎಂದು ಹೈಕೋರ್ಚ್‌ನ ಮುಖ್ಯ ನ್ಯಾಯಾಧೀಶರವರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸಂಚಾರಿ ಪೀಠದ ಬಳಿಕ ಶೀಘ್ರವೇ ಶಾಶ್ವತ ಪೀಠವೂ ಇಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಿದರು.
ಹೈಕೋರ್ಚ್ ಸಂಚಾರಿ ಪೀಠಕ್ಕೆ ಕಾರ್ಯಪ್ರವೃತ್ತರಾಗಲು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಇಲ್ಲಿನ ಮಾಜಿ ಹಾಗೂ ಹಾಲಿ ಸಂಸದರು, ಶಾಸಕರೆಲ್ಲರೂ ಪಕ್ಷಾತೀತವಾಗಿ ಸಹಕರಿಸಿದ್ದಾರೆ. ಪೀಠಕ್ಕಾಗಿ ಇಲ್ಲಿನ ಕಾನೂನು ವಿದ್ಯಾರ್ಥಿಗಳು ಪೋಸ್ಟ್ ಕಾರ್ಡ್ ಚಳವಳಿ, ಈಮೇಲ್ ಅಭಿಯಾನ ನಡೆಸಿದ್ದರೆ, ನಾಗರಿಕರು ಹಾಗೂ ವಕೀಲರ ನೇತೃತ್ವದಲ್ಲಿ ಹೋರಾಟಗಳು ನಡೆದಿವೆ. ಎಲ್ಲಾ ವರ್ಗದ ಸಾರ್ವಜನಿಕರ ಸಹಕಾರವೂ ದೊರಕಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸರಕಾರಿ ವಕೀಲರಾದ ಎಂ.ಪಿ. ನೊರೊನ್ನಾ, ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಶ್ರೀಧರ್, ಕೋಶಾಧಿಕಾರಿ ಗಿರೀಶ್ ಶೆಟ್ಟಿ, ಸುಜಿತ್ ಉಪಸ್ಥಿತರಿದ್ದರು.