ಜಿಲ್ಲಾಡಳಿತ ನಿಯಮಬದ್ದವಾಗಿ ನಡೆದುಕೊಂಡಿದ್ದರೆ ಎಮ್ಆರ್ ಪಿಎಲ್ ಗೆ ಬೀಗ ಬೀಳುತ್ತಿತ್ತು: ಮುನೀರ್ ಕಾಟಿಪಳ್ಳ

ಜಿಲ್ಲಾಡಳಿತ ನಿಯಮಬದ್ದವಾಗಿ ನಡೆದುಕೊಂಡಿದ್ದರೆ ಎಮ್ಆರ್ ಪಿಎಲ್ ಗೆ ಬೀಗ ಬೀಳುತ್ತಿತ್ತು: ಮುನೀರ್ ಕಾಟಿಪಳ್ಳ

ಹಸಿರು ವಲಯಕ್ಕೆ ಭೂಸ್ವಾಧೀನ, ಪುನರ್ವಸತಿಗೆ ವಿಳಂಬ ವಿರೋಧಿಸಿ ಜೋಕಟ್ಟೆ ನಾಗರಿಕರ ಅನಿರ್ದಿಷ್ಟವಾಗಿ ಧರಣಿಗೆ ಚಾಲನೆ


ಮಂಗಳೂರು: ಎಮ್ಆರ್ ಪಿಎಲ್ ಕಂಪೆನಿಯು ಪರಿಸರ ನಿಯಮಗಳನ್ನು ಯಾವುದೇ ಅಳುಕಿಲ್ಲದೆ ಉಲ್ಲಂಘಿಸುತ್ತಾ ಬಂದಿದೆ. ಕಂಪೆನಿಯ ತ್ಯಾಜ್ಯದಿಂದಾಗಿ ಸಮುದ್ರ ಹಾಗು ಪಲ್ಗುಣಿ ನದಿಗಳು ಮಲಿನ ಗೊಂಡಿದೆ. ಜೋಕಟ್ಟೆ ಸೇರಿದಂತೆ ಹತ್ತಿರದ ಗ್ರಾಮಗಳು ನರಕದಂತಾಗಿವೆ. ಕಂಪೆನಿಯ ಸುತ್ತಲಿನ ಜನವಸತಿ ಪ್ರದೇಶಗಳು ಮಾಲಿನ್ಯ ಸಂಬಂಧಿ ರೋಗಗಳಿಂದ ತತ್ತರಿಸಿ ಹೋಗಿವೆ. ಉದ್ಯೋಗ, ಗುತ್ತಿಗೆಯಂತಹ ಅವಕಾಶಗಳಲ್ಲಿ ಸ್ಥಳೀಯರನ್ನು ಕಂಪೆನಿ ಹತ್ತಿರಕ್ಕೂ ಸೇರಿಸುತ್ತಿಲ್ಲ. 


ಕೋಕ್ ಸಲ್ಪರ್ ಘಟಕದಿಂದ ಜೋಕಟ್ಟೆ ಭಾಗದಲ್ಲಿ  ಮಾಲಿನ್ಯದಿಂದ ಅನಾಹುತಗಳಾಗಿರುವುದು ಸಾಬೀತಾಗಿದ್ದರೂ ಕಂಪೆನಿಯು ತನ್ನ ನಡವಳಿಕೆಯನ್ನು ತಿದ್ದಿಕೊಳ್ಳುತ್ತಿಲ್ಲ. ಕೋಕ್ ಸಲ್ಪರ್ ಮಾಲಿನ್ಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ, ಜನವಸತಿಗೆ ಅಡ್ಡಲಾಗಿ ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶವನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ. ಈ ಕುರಿತು ಜಿಲ್ಲಾಡಳಿತ ಕಾನೂನು ಬದ್ದವಾಗಿ ನಡೆದುಕೊಂಡಿದ್ದರೆ ಎಮ್ ಆರ್ ಪಿ ಎಲ್ ಗೆ ಯಾವತ್ತೊ ಬೀಗಬೀಳುತ್ತಿತ್ತು ಎಂದು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. 


ಅವರು, ಸರಕಾರದ ಆದೇಶದ ಪ್ರಕಾರ ಹಸಿರು ವಲಯಕ್ಕಾಗಿ ಗುರುತು ಮಾಡಿರುವ 27 ಎಕರೆ ಜಮೀನು ಸ್ವಾಧೀನ ಹಾಗು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಎಮ್ ಆರ್ ಪಿ ಎಲ್ ಹಾಗು ಜಿಲ್ಲಾಡಳಿತ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ವಿರೋಧಿಸಿ, ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ, ಕೋಕ್ ಸಲ್ಪರ್ ಘಟಕದ ಮುಂಭಾಗ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಹೋರಾಟ ಸಮಿತಿಯ ಸದಸ್ಯರೂ, ಸಂತ್ರಸ್ತ ಗ್ರಾಮಸ್ಥರ ಪ್ರತಿನಿಧಿಗಳೂ ಆದಂತಹ ಪುಷ್ಪ, ಸುಂದರಿ, ಸುಶೀಲ ಚೆಂಡೆ ಭಾರಿಸುವ ಮೂಲಕ ಧರಣಿಗೆ ಚಾಲನೆ ನೀಡಿದರು. 


ನಾಗರಿಕ ಹೋರಾಟ ಸಮಿತಿಯ ಸಹ ಸಂಚಾಲಕ ಅಬೂಬಕ್ಕರ್ ಬಾವ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಹೋರಾಟ ಸಮಿತಿಯ ಪ್ರಮುಖರಾದ ಮನೋಜ್ ಜೋಕಟ್ಟೆ, ಸಂಸು ಇದ್ದಿನಬ್ಬ, ಇಕ್ಬಾಲ್ ಜೋಕಟ್ಟೆ, ಶೆರೀಫ್ ನಿರ್ಮುಂಜೆ, ಲಿಂಗಪ್ಪ, ಹನೀಫ್, ಸೀತಾರಾಮ ಆಚಾರ್ಯ, ವೆಂಕಟೇಶ್, ಜಾಬಿರ್ ಜೆ ಎಮ್, ಶೇಖರ ನಿರ್ಮುಂಜೆ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಶೀರ್ ಬಿ ಎಸ್, ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಂತ ಮತ್ತಿತರರು ಉಪಸ್ಥಿತರಿದ್ದರು.


ಸಿಪಿಐಎಂ ಸುರತ್ಕಲ್ ವಿಭಾಗ ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಸ್ವಾಗತಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article