ಏನನ್ನಾದರೂ ಸಾಧಿಸಲು ನಿಸ್ವಾರ್ಥವಾಗಿ ಪ್ರಯತ್ನ ಮಾಡಬೇಕು: ಕರ್ನಲ್ ನಿತಿನ್ ಭಿಡೆ

ಏನನ್ನಾದರೂ ಸಾಧಿಸಲು ನಿಸ್ವಾರ್ಥವಾಗಿ ಪ್ರಯತ್ನ ಮಾಡಬೇಕು: ಕರ್ನಲ್ ನಿತಿನ್ ಭಿಡೆ


ಮಂಗಳೂರು: ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ನಿಸ್ವಾರ್ಥವಾಗಿ ಪ್ರಯತ್ನ ಮಾಡಬೇಕಿದೆ ಎಂದು ಭಾರತೀಯ ಭೂಸೇನಾ ನಿವೃತ್ತ ಸೇನಾಧಿಕಾರಿ ಕರ್ನಲ್ ನಿತಿನ್ ಬಿಢೆ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 121ನೇ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಒಂದೇ ಗುರಿ ಬದಲಾಗಿ ಸಾಕಷ್ಟು ಆಯ್ಕೆಗಳನ್ನು ಇಟ್ಟುಕೊಂಡಲ್ಲಿ ಭವಿಷ್ಯದಲ್ಲಿ ಒಂದಲ್ಲಾ ಒಂದು ದಿನ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತದೆ. ಪ್ರಯತ್ನವನ್ನೇ ಮಾಡದೇ ಹೋದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದುಕಿನ ಪ್ರಮುಖವಾದ ನಿರ್ಧಾರಗಳನ್ನು ವಿದ್ಯಾರ್ಥಿಗಳೇ ತೆಗೆದುಕೊಳ್ಳುವ ಮೂಲಕ ನಿಮ್ಮದೇ ಬದುಕಿನ ಉತ್ತರದಾಯಿಗಲಾಗಿ ಬದುಕಲು ಸಹಾಯವಾಗುತ್ತದೆ. ಹಾಗಾಗಿ, ಸಾಕಷ್ಟು ಆಲೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಖ್ಯಾತ ನ್ಯಾಯವಾದಿ ಹಾಗೂ ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಆರ್. ಲೋಹಿದಾಸ್, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಬಹಳ ಮುಖ್ಯ. ಅಂದಿನ ಸರ್ಕಾರಿ ಕಾಲೇಜಿನಲ್ಲಿ ಸಾಹಿತ್ಯ, ಸಂಗೀತ, ನಾಟಕ ಸೇರಿದಂತೆ ನಾನಾ ರೀತಿಯ ಸಂಘಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟವು. ಅಂದು ವಿದ್ಯಾರ್ಥಿಯಾಗಿದ್ದಾಗ ಸಿಕ್ಕ ಮನ್ನಣೆಯಿಂದಾಗಿ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ಸಹಕಾರಿಯಾಯಿತು. ವಿದ್ಯಾರ್ಥಿಗಳು ಉರಿಯುವ ದೀಪವಾದರೆ, ಅದನ್ನು ಬೆಳಗಲು ಶಿಕ್ಷಕ ಎಂಬ ಶಕ್ತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಕಾಲೇಜು ದಿನ ಎಂದರೆ ಕೇವಲ ಸಂಭ್ರಮಾಚರಣೆಯಲ್ಲ, ಬದಲಾಗಿ ಸಾಧನೆ ಮೆಲುಕು ನೋಟ. ಬದುಕಿನಲ್ಲಿ ತಾನೊಬ್ಬನೇ ಬೆಳೆದರೆ ಸಾಲದು ತನ್ನ ಸುತ್ತಲಿನ ಜನರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಪದವಿ ಹಂತದಲ್ಲಿ ಕಲಿತ ವಿದ್ಯೆ ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿಯನ್ನು ಒದಗಿಸುವಂತಾಗಲಿ. ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬದ್ಧತೆಯಿಂದ ಭವಿಷ್ಯದ ಕಡೆಗೆ ಸುಭದ್ರವಾದ ಹೆಜ್ಜೆ ಹಾಕುವಂತಾಗಲಿ ಆಶಯ ವ್ಯಕ್ತಪಡಿಸಿದರು. 

ಎನ್‌ಸಿಸಿ ನೌಕಾದಳ, ಭೂದಳ ಹಾಗೂ ಕ್ರೀಡಾ ವಿಭಾಗದಲ್ಲಿ ಉನ್ನತ ಸಾಧನೆ ಮಾಡಿದ ಕ್ರಮವಾಗಿ ಕೆಡೆಟ್ ಮೋನಿಷಾ, ಸಿಕ್ಯುಎಂಎಸ್ ಸಂಜನಾ ಹಾಗೂ ವರ್ಷಾ ಪಿ. ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಪದವಿ ವ್ಯಾಸಂಗದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 

ವಿದ್ಯಾರ್ಥಿ ಸಂಘದ ಸಹ ನಿರ್ದೇಶಕ ಪ್ರೊ. ಜಯವಂತ ನಾಯಕ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಾಧಮ ಎಂ.ಕೆ. ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಇದೇ ವೇಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article