ಸಾವಿನ ದವಡೆಯಿಂದ ವ್ಯಕ್ತಿಯನ್ನು ರಕ್ಷಿಸಿದ ಪಣಂಬೂರು ಪೊಲೀಸರು
ಮೇ 22ರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಗ್ಯ ಸಮಸ್ಯೆ ಹಾಗು ಸಣ್ಣ ಮಟ್ಟಿಗಿನ ಹಣಕಾಸು ಸಮಸ್ಯೆಯಿದ್ದ ಈ ವ್ಯಕ್ತಿ ಬೆಳಿಗ್ಗೆ ಯಾರಿಗೂ ಹೇಳದೆ ಮನೆ ಬಿಟ್ಟು ಬಂದಿದ್ದು, ಫೋನ್ ಮುಖಾಂತರ ಮನೆಯವರು ಸಂಪರ್ಕಿಸಿ ಮನೆಗೆ ಹಿಂದಿರುಗಿ ಬರುವಂತೆ ಕೇಳಿಕೊಂಡರೂ ತನ್ನ ಇರುವಿಕೆ ಬಗ್ಗೆ ಹೇಳದೆ ತಾನು ಸಾಯುವುದಾಗಿ ಹೇಳಿಕೊಂಡಿದ್ದರು. ಕೊನೆಗೆ ಅವರು ಪಣಂಬೂರು ಬೀಚ್ ಹತ್ತಿರ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮುಖಾಂತರ ಸಂಜೆ 5.30 ಗಂಟೆ ಸುಮಾರಿಗೆ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್‌ರವರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದರು.
ಕೂಡಲೇ ತಂಡದೊಂದಿಗೆ ಕಾರ್ಯಪ್ರವೃತ್ತರಾದ ಪೊಲೀಸರು ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿರುತ್ತಾರೆ. ಮೊದಲಿಗೆ ಫೋನ್ ಮಾಡಿ ಸಂಪರ್ಕ ಸಾಧಿಸಿದ ಪೊಲೀಸರು ಕೌನ್ಸಿಲಿಂಗ್ ಮಾಡಿ ಎಷ್ಟು ಸಾಂತ್ವಾನ ಹೇಳಿದರೂ ವ್ಯಕ್ತಿ ಸ್ಪಂದಿಸಿಲ್ಲ. ಕೊನೆಗೆ ನಿರಂತರ ಒಂದುವರೆ ಗಂಟೆ ಕಾಲ ಹುಡುಕಾಡಿದ ನಂತರ ಸಂಜೆ ಸುಮಾರು 7 ಗಂಟೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಕಾಲಿಕ ಕ್ರಮ ಕೈಗೊಂಡು ಅವರನ್ನು ಪಣಂಬೂರು ಠಾಣೆಗೆ ಕರೆದುಕೊಂಡು ಬಂದು ನೀರು,ಆಹಾರ ನೀಡಿ ಸತ್ಕರಿಸಿ, ಕೌನ್ಸೆಲಿಂಗ್ ನಡೆಸಿ ಕೊನೆಗೆ ಅವರ ಸಂಬಂಧಿಕರ ಜೊತೆ ಮನೆಗೆ ಕಳುಹಿಸಿಕೊಡಲಾಗಿದೆ.
ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್‌ಐ ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣ ಬಸವ, ಅನ್ವರ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.