ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎಂಆರ್‌ಪಿಎಲ್ ಎಟಿಎಫ್ ಪೈಪ್‌ಲೈನ್ ನಿರ್ಮಾಣ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯಿಂದ ಈ ಯೋಜನೆಗೆ ಅನುಮತಿ ದೊರೆತಿದ್ದು, ದೇವನಗೊಂಡಿ ಮಾರ್ಕೆಟಿಂಗ್ ಟರ್ಮಿನಲ್‌ನಿಂದ Kempegowda International Airport ಒಳಗೊಂಡಿರುವ ಇತ್ತೀಚಿನ ಕಾಮನ್ ಯೂಸರ್ ಫ್ಯೂಯೆಲ್ ಫಾರ್ಮ್ ಹಾಗೂ ನಿರ್ಮಾಣ ಹಂತದಲ್ಲಿರುವ ಸ್ಯಾಟಲೈಟ್ ಫ್ಯೂಯೆಲ್ ಫಾರ್ಮ್ ವರೆಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗುತ್ತದೆ.
ಈ ಯೋಜನೆಯನ್ನು 36 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎಟಿಎಫ್ ಸರಬರಾಜು ಇನ್ನಷ್ಟು ವೇಗವಾಗಿ, ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ನಡೆಯಲಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸರಕು ಸಾಗಣೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಈ ಯೋಜನೆ ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಇದರಿಂದ ಬೆಂಗಳೂರು ದೇಶದ ಪ್ರಮುಖ ವಿಮಾನಯಾನ, ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ಸ್ ಕೇಂದ್ರವಾಗಿ ಮತ್ತಷ್ಟು ಬಲಪಡಲಿದೆ.
ಎಂಆರ್ಪಿಎಲ್‌ನ ದೇವನಗೊಂಡಿ ಮಾರ್ಕೆಟಿಂಗ್ ಟರ್ಮಿನಲ್ ಈಗಾಗಲೇ ಬೆಂಗಳೂರು ಪ್ರದೇಶದ ಪ್ರಮುಖ ಮೂಲಸೌಕರ್ಯವಾಗಿ ಹೊರಹೊಮ್ಮಿದೆ. ಈ ಟರ್ಮಿನಲ್ ಮೂಲಕ ಪೆಟ್ರೋಲ್, ಡೀಸೆಲ್ ಹಾಗೂ ಏವಿಯೇಷನ್ ಟರ್ಬೈನ್ ಫ್ಯುಯೆಲ್ ವಿತರಣೆ ನಡೆಯುತ್ತಿದ್ದು, ಮಂಗಳೂರಿನ ಎಂಆರ್‌ಪಿಎಲ್ ಘಟಕದಿಂದ ಪಿಎಂಎಚ್‌ಬಿಎಲ್ ಪೈಪ್‌ಲೈನ್ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿದೆ.
ಈ ಕುರಿತು ಎಂಆರ್‌ಪಿಎಲ್ ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಮಾತನಾಡಿ, “ಬೆಂಗಳೂರು ವಿಮಾನ ನಿಲ್ದಾಣದ ಹೆಚ್ಚುತ್ತಿರುವ ಎಟಿಎಫ್ ಬೇಡಿಕೆಯನ್ನು ಪೂರೈಸಲು ಈ ಪೈಪ್‌ಲೈನ್ ಗೇಮ್ ಚೇಂಜರ್ ಆಗಲಿದೆ. ಜೊತೆಗೆ ದೇಶದ ಪ್ರಮುಖ ಬೆಳವಣಿಗೆ ಕೇಂದ್ರಗಳಲ್ಲಿ ಎಂಆರ್ಪಿಎಲ್ ತನ್ನ ಹೈಡ್ರೋಕಾರ್ಬನ್ ವ್ಯಾಪ್ತಿಯನ್ನು ವಿಸ್ತರಿಸಲು ಇದು ನೆರವಾಗಲಿದೆ,” ಎಂದು ತಿಳಿಸಿದ್ದಾರೆ.