ಜಿಲ್ಲಾಧಿಕಾರಿಗಳಿಗೆ ಜನಸಾಮಾನ್ಯರು, ಪರಿಸರಕ್ಕಿಂತ ಎಂ.ಆರ್.ಪಿ.ಎಲ್. ಮೇಲೆ ಹೆಚ್ಚು ಕಾಳಜಿ: ಮುನೀರ್ ಕಾಟಿಪಳ್ಳ
Tuesday, May 19, 2026
ಜೋಕಟ್ಟೆ ನಾಗರಿಕರ ಧರಣಿ ಎರಡನೆ ದಿನಕ್ಕೆ
ಮಂಗಳೂರು: ಕೋಕ್ ಸಲ್ಪರ್ ಘಟಕದ ಸಹಿತ ಎಮ್ ಆರ್ ಪಿಎಲ್ ನಿಂದ ಜನಸಾಮಾನ್ಯರ ಆರೋಗ್ಯ, ಪರಿಸರದ ಮೇಲಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತು ದ.ಕ. ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಯಾವುದೇ ಕಾಳಜಿ ಇಲ್ಲ. ಎಮ್ಆರ್ ಪಿಎಲ್ ಸಹಿತ ಮಾಲಿನ್ಯಕಾರಕ ಕೈಗಾರಿಕೆಗಳ ಹಿತಕಾಯಲು ಮಾತ್ರ ಟೊಂಕಕಟ್ಟಿ ನಿಲ್ಲುತ್ತಾರೆ. ಜೋಕಟ್ಟೆ, ಕೆಂಜಾರು ಭಾಗದಲ್ಲಿ ಗ್ರಾಮಸ್ಥರು ಎದುರಿಸುತ್ತಿರುವ ನರಕ ಸದೃಶ ಸ್ಥಿತಿಯ ಅರಿವಿದ್ದರೂ ಭೂಸ್ವಾಧೀನ, ಪುನರ್ವಸತಿಗೆ ಸಂಬಂಧಿಸಿ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಅವರು, ಅಂತಿಮಗೊಂಡಿರುವ ಒಪ್ಪಂದದ ಪ್ರಕಾರ ಹಸಿರು ವಲಯಕ್ಕಾಗಿ ಭೂಸ್ವಾಧೀನ ಹಾಗು ಸಂತ್ರಸ್ತರಿಗೆ ಪುನರ್ವಸತಿಯನ್ನು ಮಾತುಕೊಟ್ಟಂತೆ ಶೀಘ್ರದಲ್ಲಿ ನಡೆಸುವಂತೆ ಆಗ್ರಹಿಸಿ ಕೋಕ್ ಸಲ್ಫರ್ ಘಟಕದ ಮುಂಭಾಗ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟವಾಗಿ ಧರಣಿಯ ಎರಡನೆ ದಿನದ ಸಭೆಯಲ್ಲಿ ಪಾಲ್ಗೊಂಡು ಮಾತಾಡುತ್ತಿದ್ದರು. ಭೂಸ್ವಾಧೀನ, ಪುನರ್ವಸತಿ ಕಲ್ಪಿಸಲು ಕಂಪೆನಿ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಜಿಲ್ಲಾಧಿಕಾರಿಗಳು ಸೂಚಿಸಿದಂತೆ ನಡೆಯುವುದಾಗಿ ಎಮ್ಆರ್ ಪಿಎಲ್ ಹೇಳಿಕೊಂಡಿದೆ. ಜಿಲ್ಲಾಧಿಕಾರಿಗಳು ಈಗಲಾದರು ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲ್, ನಾಗರಿಕ ಹೋರಾಟ ಸಮಿತಿ ಸಹ ಸಂಚಾಲಕ ಅಬೂಬಕ್ಕರ್ ಬಾವ, ಪತ್ರಕರ್ತ ನವೀನ್ ಸೂರಿಂಜೆ, ಶ್ರೀನಾಥ್ ಕುಲಾಲ್, ಜೋಕಟ್ಟೆ ಪಂಚಾಯತ್ ಮಾಜಿ ಉಪಾಧ್ಯಕ್ಷ ಸಂಸು ಇದ್ದಿನಬ್ಬ, ಹನೀಫ್ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಮನೋಜ್ ಜೋಕಟ್ಟೆ, ಶೇಖರ್ ನಿರ್ಮುಂಜೆ, ಶೆರೀಫ್ ನಿರ್ಮುಂಜೆ, ಸಿಲ್ವಿಯಾ ಜೋಕಟ್ಟೆ, ಪುಷ್ಪ ಡಿ, ಮರಿಯಾ, ಚಂದ್ರಶೇಖರ, ಸೀತಾರಾಮ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

