‘ಕೊಂಕಣಿ ಭಾಷೆ ಬೆಳೆಯಲು ಭಾಷೆಯನ್ನು ಹೆಚ್ಚು ಬಳಸಬೇಕು’: ಸುಲಕ್ಷಣಾ ಸಾವಂತ
ಹೊಸದಿಲ್ಲಿಯ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ರವಿವಾರ ನಡೆದ ವಿಶ್ವ ಕೊಂಕಣಿ ಸಮಾರೋಹ ಸಮಾರಂಭಕ್ಕೆ ಅವರು ಚಾಲನೆ ನೀಡಿ, ಕೊಂಕಣಿ ಭಾಷೆ ಹಲವು ಲಿಪಿಗಳಲ್ಲಿ, 40ಕ್ಕೂ ಅಧಿಕ ಪ್ರಾದೇಶಿಕ ವೈವಿಧ್ಯಗಳೊಂದಿಗೆ ಬೆಳೆಯುತ್ತಿರುವ ವಿಶಿಷ್ಟ ಭಾಷೆಯಾಗಿದೆ. ಸಣ್ಣ ಸಂಖ್ಯೆಯ ಭಾಷಿಕರನ್ನು ಹೊಂದಿದ್ದರೂ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸ್ಥಾನ, ರಾಜ್ಯಭಾಷೆಯ ಮಾನ್ಯತೆ ಹಾಗೂ ಸಾಹಿತ್ಯ-ಸಾಂಸ್ಕೃತಿಕ ಗುರುತಿನ ಮೂಲಕ ತನ್ನದೇ ಆದ ಅಸ್ಮಿತೆ ರೂಪಿಸಿಕೊಂಡಿದೆ. ವಿಶ್ವ ಕೊಂಕಣಿ ಕೇಂದ್ರ ಕೊಂಕಣಿ ಭಾಷೆ, ಸಾಹಿತ್ಯಕ್ಕೆ ನೀಡುತ್ತಿರುವ ಕೊಡುಗೆ ಅಪಾರ. ಉಪ ಭಾಷೆಯ ಜನರನ್ನು ಸಂಘಟಿಸಿ ಜಾನಪದವನ್ನು ಉಳಿಸಿ ಬೆಳೆಸುವ ಕ್ರಮ ಶ್ಲಾಘನೀಯ. ಭಾಷೆ ಸಾಹಿತ್ಯದ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಯುವಜನ ರನ್ನು ವಿಶೇಷವಾಗಿ ಭಾಷೆಯತ್ತ ಆಕರ್ಷಿಸಬಹುದು ಎಂದರು.
ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿ ಸದಸ್ಯ ಎಚ್. ಎಂ. ಪೆರ್ನಾಲ್ ಪ್ರಾಸ್ತಾವಿಸಿ, ಭಾರತೀಯ ಭಾಷೆಗಳ ಬೆಳವಣಿಗೆ ಹಾಗೂ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚ ಯಿಸುವ ಕಾರ್ಯದಲ್ಲಿ ಅಕಾಡೆಮಿ ತೊಡಗಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಮಂಡಳಿ ಸಂಚಾಲಕ ಮೆಲ್ವಿನ್ ರೊಡ್ರಿಗಸ್ ಮಾತನಾಡಿ, ವಿಶ್ಲೇಷಣೆಗೆ ಒಳಪಟ್ಟಾಗ ಮಾತ್ರ ಸಾಹಿತ್ಯದಲ್ಲಿ ಸಮತೋಲಿತ ಹಾಗೂ ಸೃಜನಶೀಲ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಪ್ರಾಸ್ತಾವಿಸಿ, ಸ್ವಾಗತಿಸಿದರು. ಉಪಾಧ್ಯಕ್ಷ ಡಾ. ಕಿರಣ್ ಬುಡಕುಳೆ ದಿಕ್ಸೂಚಿ ಭಾಷಣ ಮಾಡಿದರು. ಸುಚಿತ್ರಾ ಶೆಣೈ ಕಾರ್ಯ ಕ್ರಮ ನಿರೂಪಿಸಿದರು.
ಸಾಹಿತ್ಯ ಅಕಾಡೆಮಿ ಕೊಂಕಣಿ ಅಡ್ವೆಸರಿ ಬೋರ್ಡ್ ಸದಸ್ಯ ಹೆನ್ರಿ ಮೆಂಡೋನ್ಸಾ, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ, ಕೇಂದ್ರದ ಉಪಾಧ್ಯಕ್ಷ ಡಿ. ರಮೇಶ ನಾಯಕ್, ಕೋಶಾಧಿಕಾರಿ ಬಿ. ಆರ್. ಭಟ್, ಸಿಎಒ ಡಾ. ಬಿ. ದೇವದಾಸ್ ಪೈ, ಸಲಹಾ ಸಮಿತಿ ಸದಸ್ಯರಾದ ಎಂ. ಆರ್. ಕಾಮತ್, ಗೋವಿಂದ ರಾಯ ಪ್ರಭು, ಸುಚಿತ್ರಾ ನಾಯಕ್ ಮೊದಲಾದವರಿದ್ದರು.