ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುತ್ತಿರುವ ಕೇಂದ್ರ ಶಿಕ್ಷಣ ಸಚಿವರು ರಾಜಿನಾಮೆ ನೀಡಲು ರಮಾನಾಥ ರೈ ಆಗ್ರಹ
ಅವರು ಇಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿ, 2020ರಿಂದ ಮೂರ್ನಾಲ್ಕು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಅಂದಿನಿಂದ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಓರ್ವನನ್ನೂ ಬಂಧಿಸಿಲ್ಲ. ಇದರ ವಿರುದ್ಧ ಕ್ರಮ ಕೈಗೊಂಡಿದ್ದರೆ ಇಂದು ಇಂತಹ ಕ್ಷಣ ಎದುರಾಗುತ್ತಿರಲಿಲ್ಲ. ಆಗ ಮುಂದೆ ಹೀಗೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಮತ್ತು ತನಿಖೆ ನಡೆಸುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿತ್ತು. ತನಿಖೆ ಯಾವ ಹಂತಕ್ಕೆ ತಲುಪಿದೆ, ಯಾರಿಗೆ ಶಿಕ್ಷೆ ಆಗಿದೆ ಎಂಬುದನ್ನು ಕೇಂದ್ರ ಸರಕಾರ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ನಿವೃತ್ತ ಸರಕಾರಿ ಅಧಿಕಾರಿಗಳ, ಮಂತ್ರಿಗಳ ಬೆಂಬಲದ ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್‌ಗಳ ಮಾಫಿಯಾವೂ ಈ ಸೋರಿಕೆಯ ಹಿಂದಿರುವ ಸಾಧ್ಯತೆ ಇದೆ. ಇದು ಲಕ್ಷಾಂತರ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಎಂದು ಆರೋಪಿಸಿದ ಅವರು ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವುದಾಗಿ ಹೇಳಲಾಗಿದೆ. ಆದರೆ ಸರಕಾರಿ ತನಿಖಾ ಸಂಸ್ಥೆಗಳ ಬಗ್ಗೆ ಅನುಮಾನ ಪಡುವ ಪರಿಸ್ಥಿತಿ ಇದೆ. ಪರೀಕ್ಷೆಯನ್ನೇ ರಕ್ಷಿಸಲಾದ ಸರಕಾರ ಮಕ್ಕಳ ಭವಿಷ್ಯವನ್ನು ಹೇಗೆ ರಕ್ಷಿಸುತ್ತದೆ ಎಂದು ಪ್ರಶ್ನಿಸಿದರು.
ಡೀಸೆಲ್, ಪೆಟ್ರೋಲ್ ಮಿತವಾಗಿ ಬಳಸಿ, ಚಿನ್ನ ಖರೀದಿಸಬೇಡಿ ಎಂಬುದಾಗಿ ಜನರಿಗೆ ತ್ಯಾಗದ ಪಾಠ ಮಾಡುವ ಪ್ರಧಾನಿ ಮೋದಿಯವರು ಅಧಿಕಾರ ತ್ಯಾಗ ಮಾಡಿದರೆ ದೇಶದ ಜನರಿಗೆ ಸುಖ ಸಿಗಲಿದೆ ಎಂದು ರಮಾನಾಥ ರೈ ಹೇಳಿದರು.
ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಆರಂಭದಲ್ಲಿ ಎಲ್‌ಪಿಜಿ ಸಬ್ಸಿಡಿ ತ್ಯಜಿಸಿ ಎಂದು ಕರೆ ನೀಡಿದ್ದರು. ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಎಲ್‌ಪಿಜಿ ದರ ಜನಸಾಮಾನ್ಯರಿಗೆ ಹೊರೆ ಆಗದಿರಲೆಂದು ಸಬ್ಸಿಡಿ ನೀಡುತ್ತಿತ್ತು. ಸಬ್ ಕಾ ವಿಕಾಸ್, ಸಬ್ ಕಾ ಸಾತ್, ಸಬ್‌ಕಾ ವಿಶ್ವಾಸ್, ವಿಕಸಿತ ಭಾರತ್ ಎಂದು ಪ್ರತಿದಿನ ಸ್ಲೋಗನ್‌ಗಳನ್ನೇ ಹೇಳುವ ಕೇಂದ್ರ ಸರಕಾರ ಇದೀಗ ಮೋಸ ಮಾಡುವ ಕೆಲಸ ಮಾಡುತ್ತಿದೆ. ಬಂಗಾರವೆಂದರೆ ಹೆಣ್ಣು ಮಕ್ಕಳಿಗೆ ಕೇವಲ ಕಬ್ಬಿಣವಲ್ಲ. ಅದು ಅವರ ಭಾವನೆ, ಕನಸು ಹಾಗೂ ಕಷ್ಟ ಕಾಲದಲ್ಲಿ ಆ ಚಿನ್ನವನ್ನು ಇಟ್ಟು ಸಂಸಾರ ನಡೆಸುತ್ತಾರೆ. ಆದರೆ ಕೇಂದ್ರ ಸರಕಾರದ ನೀತಿಗಳು ಹೆಣ್ಣು ಮಕ್ಕಳ ಭಾವನೆಯನ್ನು ಪ್ರಶ್ನಿಸುವಂತಿದೆ ಎಂದವರು ಹೇಳಿದರು.
ಮಧ್ಯ ಪ್ರಾಚ್ಯ ಯುದ್ಧದ ಹೊರತಾಗಿಯೂ ಅಮೆರಿಕದ ಡಾಲರ್ ಮೌಲ್ಯ ಹೆಚ್ಚಾಗುತ್ತಿದೆ. ಆದರೆ ನಮ್ಮ ಪರಿಸ್ಥಿತಿ ಎಲ್ಲಿಗೆ ತಲುಪಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಏರಿಕೆಯಿಂದ ದಿನ ಬಳಕೆ ವಸ್ತುಗಳ ಮೇಲೆಯೂ ಪರಿಣಾಮ ಬೀರಿದೆ. ಕೇಂದ್ರ ಸರಕಾರ ಜನಸಾಮಾನ್ಯರ ಹಿತ ಕಾಯುವ ಬದಲು ಶ್ರೀಮಂತರ, ಬಂಡವಾಳಶಾಹಿಗಳ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖಂಡರಾದ ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಅಪ್ಪಿ,ವಿಕಾಸ್ ಶೆಟ್ಟಿ, ಬೇಬಿ ಕುಂದರ್, ಜಯಶೀಲ ಅಡ್ಯಂತಾಯ, ಸುಹಾನ್ ಆಳ್ವ, ಶುಭೋದಯ ಆಳ್ವ, ಯೋಗೀಶ್, ಶಬೀರ್ ಸಿದ್ಧಕಟ್ಟೆ, ನಝೀರ್ ಬಜಾಲ್, ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.