ಕರಾವಳಿಯಲ್ಲಿ ಮಳೆ: ಮುಂಗಾರು ಪೂರ್ವ ಚಟುವಟಿಕೆ ಚುರುಕು
ಮಂಗಳೂರು: ಕರಾವಳಿ ಭಾಗಗಳಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳು ವೇಗ ಪಡೆಯುತ್ತಿದ್ದು, ಮೇ 12ರ ಸುಮಾರಿಗೆ ತಮಿಳುನಾಡು ಕರಾವಳಿಯ ಸಮೀಪ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪ್ರದೇಶ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಪರಿಣಾಮ ಮೇ 13ರಿಂದ ಕರ್ನಾಟಕ ಕರಾವಳಿ, ಕೇರಳ ಹಾಗೂ ತಮಿಳುನಾಡಿನ ಹಲವೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಲಕ್ಷಣಗಳಿವೆ.
ಮೇ 15ರಿಂದ ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದಲ್ಲಿ ದಕ್ಷಿಣಪಶ್ಚಿಮ ಮುಂಗಾರು ಮಾರುತಗಳ ಚಲನೆ ಚುರುಕುಗೊಳ್ಳಲಿದ್ದು, ಕರಾವಳಿಗೆ ಮುಂಗಾರು ಪೂರ್ವ ಮಳೆಯ ಪ್ರವೇಶ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಹಲವೆಡೆ ಮುಂದಿನ ನಾಲ್ಕೈದು ದಿನಗಳ ಕಾಲ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕೆಲವೆಡೆ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಹಾಗೂ ಸಮುದ್ರ ತೀರ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮುಂಗಾರು ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿರುವುದರಿಂದ ಈ ಬಾರಿ ಮುಂಗಾರು ಸ್ವಲ್ಪ ಮುಂಚಿತವಾಗಿ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ.