ಆಸ್ತಿ ವಿವಾದ: ಮಗನಿಂದ ತಂದೆಗೆ ಥಳಿತ

ಆಸ್ತಿ ವಿವಾದ: ಮಗನಿಂದ ತಂದೆಗೆ ಥಳಿತ

ಕುಂದಾಪುರ: ಸಾಲ ತೀರಿಸಿ ಮನೆ ಉಳಿಸಿಕೊಂಡ ಮಗಳ ಹೆಸರಿಗೆ ಆಸ್ತಿ ಮಾಡಿಕೊಟ್ಟಿದ್ದಕ್ಕೆ ಆಕ್ರೋಶಗೊಂಡ ಮಗನೋರ್ವ ತನ್ನ ವೃದ್ಧ ತಂದೆಯ ಮೇಲೆಯೇ ಭೀಕರವಾಗಿ ಹಲ್ಲೆ ನಡೆಸಿರುವ ದುರ್ಘಟನೆ ಕುಂದಾಪುರ ಹೊರವಲಯದ ಬಳ್ಕೂರು ಗ್ರಾಮದಲ್ಲಿ ನಡೆದಿದೆ. 

ದಾಳಿಯಿಂದ ಜರ್ಝರಿತರಾದ ತಂದೆ ರಘು ಪೂಜಾರಿ (68) ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ವಿವರ: 

ದೂರುದಾರರಾದ ರಘು ಪೂಜಾರಿ ಅವರು ಬಳ್ಕೂರು ಗ್ರಾಮದ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರು. ಮಕ್ಕಳ ಮದುವೆಗಾಗಿ ಬಸ್ರೂರು ಸೊಸೈಟಿಯಲ್ಲಿ ಮನೆ ಈಡು ಮಾಡಿದ್ದ ಸಾಲವನ್ನು ತೀರಿಸಲಾಗದೆ ಮನೆ ಹರಾಜಿನ ಹಂತಕ್ಕೆ ತಲುಪಿತ್ತು. ಈ ಸಂಕಷ್ಟದ ಸಮಯದಲ್ಲಿ ಮಗಳು ಪ್ರಮೀಳಾ ಅವರು ತನ್ನ ಸ್ವಂತ ಹಣದಿಂದ ಸಾಲವನ್ನು ಪಾವತಿಸಿ ಮನೆಯನ್ನು ಉಳಿಸಿದ್ದರು. 

ಈ ಹಿನ್ನೆಲೆಯಲ್ಲಿ ತಂದೆ ರಘು ಪೂಜಾರಿ ಅವರು ಮನೆಯನ್ನು ಮಗಳ ಹೆಸರಿಗೆ ವರ್ಗಾಯಿಸಿದ್ದರು. ಆದರೆ, ಈ ವಿಷಯದ ಕುರಿತು ಮಗ ನವೀನ್ ನಿರಂತರವಾಗಿ ತಕರಾರು ಎತ್ತುತ್ತಿದ್ದ ಎನ್ನಲಾಗಿದೆ. ಮನೆ ಮಾರಿ ನನಗೆ ಹಣ ಕೊಡು ಎಂದು ಪೀಡಿಸುತ್ತಿದ್ದ ನವೀನ್ ಈ ಹಿಂದೆ ಕೂಡ ಹಲವು ಬಾರಿ ತಂದೆಯ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. 

ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದ ನವೀನ್, ಮೇ 9ರಂದು ಸಂಜೆ 5.30ರ ಸುಮಾರಿಗೆ ತಂದೆಯ ಮನೆಗೆ ಅತಿಕ್ರಮವಾಗಿ ನುಗ್ಗಿದ್ದಾನೆ. ನನ್ನ ಮೇಲೆ ಪೊಲೀಸ್ ದೂರು ನೀಡುತ್ತೀಯಾ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃದ್ಧ ತಂದೆಯ ಕೆನ್ನೆಗೆ ಹೊಡೆದು, ಮುಷ್ಠಿಯಿಂದ ಮೂಗಿಗೆ ಬಲವಾಗಿ ಗುದ್ದಿದ್ದಾನೆ. ಹಲ್ಲೆಯ ತೀವ್ರತೆಗೆ ರಘು ಪೂಜಾರಿ ಅವರ ಮೂಗಿನಿಂದ ತೀವ್ರ ರಕ್ತಸ್ರಾವವಾಗಿದೆ. ಗಾಯಗೊಂಡ ತಂದೆ ರಘು ಅವರ ಕಿರುಚಾಟ ಕೇಳಿ ಅವರ ಪತ್ನಿ ಮತ್ತು ಮಗಳು ರಕ್ಷಣೆಗೆ ಧಾವಿಸಿದಾಗ, ಆರೋಪಿ ನವೀನ್ ಅವರಿಗೆ ಪ್ರಾಣ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಾಳು ರಘು ಪೂಜಾರಿ ಅವರು ನೀಡಿದ ಹೇಳಿಕೆಯ ಆಧಾರದ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ನವೀನ್ ವಿರುದ್ಧ ಅತಿಕ್ರಮ ಪ್ರವೇಶ, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article