ಅರಣ್ಯದಲ್ಲಿ ಚಿರತೆ ಸಂತತಿ ಹೆಚ್ಚಳ

ಅರಣ್ಯದಲ್ಲಿ ಚಿರತೆ ಸಂತತಿ ಹೆಚ್ಚಳ

ಮಂಗಳೂರು: ಮಂಗಳೂರು ತಾಲೂಕಿನಲ್ಲಿ ಮೀಸಲು ಅರಣ್ಯ ಪ್ರದೇಶ ಶೂನ್ಯವಾಗಿದೆ. ತೋಡಾರು, ಮೂಡಬಿದ್ರೆ ಕಡೆಯಿಂದ ಚಿರತೆಗಳು ಮಂಗಳೂರು ತಾಲೂಕಿನತ್ತ ಬರುತ್ತಿವೆ. ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ಚಿರತೆಗಳ ಸಂತತಿ ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ಆಹಾರ, ನೀರು ಅರಸಿಕೊಂಡು ನಾಡಿನತ್ತ ಬರುತ್ತಿವೆ. ಕುಲಶೇಖರ ಮತ್ತು ಬಡಗ ಎಕ್ಕಾರುವಿನಲ್ಲಿ ತಿರುಗಾಡುತ್ತಿದ್ದ ಎರಡು ಚಿರತೆಗಳನ್ನು ಈಗಾಗಲೇ ಅರಣ್ಯಕ್ಕೆ ಹಿಂದಟ್ಟಲಾಗಿದೆ. ಈ ರೀತಿಯಾಗಿ ರಕ್ಷಣೆ ಮಾಡಿ ಕಾಡಿಗೆ ಬಿಡುವ ವನ್ಯ ಜೀವಿಗಳ ಮೇಲ್ವಿಚಾರಣೆಯನ್ನೂ ಮಾಡಲಾಗುತ್ತದೆ ಎಂದು ಅರಣ್ಯ ಅಧಿಕಾರಿ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ಮಾಹಿತಿ ನೀಡಿದರು.

ಶಾಸಕ ಡಾ.ವೈ. ಭರತ್ ಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು.

ಹೊಟೇಲ್-ಬೀದಿಬದಿ ವ್ಯಾಪಾರದಲ್ಲಿ ಕಳಪೆ ಅಡುಗೆ ಎಣ್ಣೆ ಬಳಕೆಯಾಗುತ್ತಿರುವ ದೂರುಗಳಿದ್ದು, ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ ನಡೆಸಬೇಕು. ಮುಂದಿನ ಸಭೆಯಿಂದ ಈ ಅಧಿಕಾರಿಗಳು ಹಾಜರಿರುವಂತೆ ಸೂಚನೆ ನೀಡಬೇಕು ಎಂದು ಭರತ್ ಶೆಟ್ಟಿ, ತಾಪಂ ಇಒಗೆ ನಿರ್ದೇಶಿಸಿದರು. 

ನಾಯಿ ಕಡಿತ..

ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಜನವರಿಯಿಂದ ಎಪ್ರಿಲ್ವರೆಗಿನ ನಾಲ್ಕು ತಿಂಗಳಲ್ಲಿ 8,456 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಮನೆಗಳಲ್ಲಿ ಸಾಕು ನಾಯಿಗಳು ಮಕ್ಕಳನ್ನು ಕಚ್ಚುವುದು ಹೆಚ್ಚಳವಾಗಿ ಕಂಡು ಬರುತ್ತಿದ್ದರೆ, 1,000ಕ್ಕೂ ಅಧಿಕ ಪ್ರಕರಣಗಳು ಬೀದಿ ನಾಯಿಗಳಿಂದ ಕಡಿತ, ದಾಳಿಯದ್ದಾಗಿವೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. 

ಇಷ್ಟು ಪ್ರಮಾಣದಲ್ಲಿ ನಾಯಿ ಕಡಿತದ ಪ್ರಕರಣಗಳು ದಾಖಲಾಗಿರುವಾಗ ಸಾರ್ವಜನಿಕವಾಗಿ ರೇಬಿಸ್ ವಿರುದ್ಧ ಚುಚ್ಚುಮದ್ದು ಪಡೆಯುವ ಜಾಗೃತಿ ಮೂಡಿರುವುದು ಸಂತಸದ ವಿಚಾರ. ಆದರೆ ರೇಬಿಸ್ ತಗಲಿದ ನಾಯಿಗಳಿದ್ದಲ್ಲಿ ಅದರಿಂದ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಬೀದಿ ನಾಯಿಗಳು ಸಾರ್ವಜನಿಕರ ಸಂಪರ್ಕಕ್ಕೆ ಬಾರದ ರೀತಿಯಲ್ಲಿ ಸೂಕ್ತ ಕ್ರಮ ವಹಿಸಬೇಕಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಶಾಸಕರು ಹೇಳಿದರು. 

ರೇಬಿಸ್ಗೊಳಗಾದ ನಾಯಿ ಕಡಿತದಿಂದ ಮಾತ್ರವೇ ರೇಬೀಸ್ ಹರಡಬೇಕೆಂದೇನಿಲ್ಲ. ಮನೆಗಳಲ್ಲಿ ಸಾಕುವ ನಾಯಿಗಳಿಗೆ ಹೆಗ್ಗಣಗಳು ಕಚ್ಚುವುದರಿಂದಲೂ ರೇಬೀಸ್ ಬರಬಹುದು. ಹಾಗಾಗಿ ಸಾಕು ನಾಯಿಗಳ ಬಗ್ಗೆಯೂ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾ.ಪಂ. ಆಡಳಿತಾಧಿಕಾರಿ ಶಕುಂತಳಾ ಶೆಣೈ, ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ, ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಯೋಜನಾಧಿಕಾರಿ ಸುಕನ್ಯಾ ರಾವ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article