ರಾಮಕೃಷ್ಣ ಮಿಷನ್‌ನಿಂದ ಮೇ ತಿಂಗಳ ಸ್ವಚ್ಛತಾ ಮಂಗಳೂರು ಅಭಿಯಾನ

ರಾಮಕೃಷ್ಣ ಮಿಷನ್‌ನಿಂದ ಮೇ ತಿಂಗಳ ಸ್ವಚ್ಛತಾ ಮಂಗಳೂರು ಅಭಿಯಾನ


ಮಂಗಳೂರು: ರಾಮಕೃಷ್ಣ ಮಿಷನ್-ಸ್ವಚ್ಛ ಮಂಗಳೂರು ಅಭಿಯಾನದ ಮೇ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ರೋಸಾರಿಯೋ ಚರ್ಚ್ ಮುಖ್ಯಸ್ಥ ಫಾ. ವಲೇರಿಯನ್ ಡಿ’ಸೋಜಾ ಹಾಗೂ ಎಂ.ಆರ್.ಪಿ.ಎಲ್. ಸಂಸ್ಥೆಯ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಅವರು ಮೇ.3 ರಂದು ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು. 


ರೋಸಾರಿಯೋ ಚರ್ಚ್ ಮುಖ್ಯಸ್ಥ ಫಾ. ವಲೇರಿಯನ್ ಡಿ’ಸೋಜಾ ಮಾತನಾಡಿ, ಯುವಕರು ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಗರವನ್ನು ಸ್ವಚ್ಛವಾಗಿಡಲು ತಮ್ಮ ಸಮಯವನ್ನು ಕೊಡುಗೆಯಾಗಿ ನೀಡುತ್ತಿರುವುದು ಸಂತೋಷಕರವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಮಿಷನ್‌ಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.


ಎಂ.ಆರ್.ಪಿ.ಎಲ್. ಸಂಸ್ಥೆಯ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಮಾತನಾಡಿ, ಸಮುದಾಯದ ಪಾಲ್ಗೊಳ್ಳಿಕೆ, ಪರಿಸರ ಜವಾಬ್ದಾರಿ ಮತ್ತು ಸುಸ್ಥಿರ ಅಭಿವೃದ್ಧಿಯ ದೃಷ್ಠಿಯಿಂದ ಇಂತಹ ಮಹತ್ವದ ಕಾರ್ಯಕ್ರಮದೊಂದಿಗೆ ನಮ್ಮ ಸಂಸ್ಥೆ ಸೇರಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.


5 ಬ್ಲ್ಯಾಕ್ ಸ್ಪಾಟ್‌ಗಳ ತೆರವು:


ಇನ್ನೊಂದೆಡೆ, ಹಿರಿಯ ಸ್ವಯಂಸೇವಕರಾದ ಉದಯ್ ಕೆ.ಪಿ., ಬಾಲಕೃಷ್ಣ ಭಟ್, ವಿಠ್ಠಲ್ ದಾಸ್ ಪ್ರಭು, ಡಾ. ಕೃಷ್ಣ ಶರಣ್, ಅನಿರುದ್ಧ ನಾಯಕ್, ಪ್ರಕಾಶ್, ಗಂಗಾಧರ ಶಾಸ್ತ್ರಿ, ಅವಿನಾಶ್, ರಾಜೀವಿ ಚಂದ್ರಶೇಖರ್, ಯೋಗೇಶ್ ಕಾರ್ಯತಡ್ಕ, ತಾರಾನಾಥ ಆಳ್ವ, ನಾಗೇಶ್ ಸರಿಪಳ್ಳ, ಅಕ್ಷಿತ್ ಅತ್ತಾವರ, ದಾಮೋದರ್ ಭಟ್, ಸಚಿನ್ ಶೆಟ್ಟಿ, ಸುನಂದ ಶಿವರಾಮ್, ಪ್ರಜ್ವಲ್, ಪ್ರಥಮ್ ಹಾಗೂ ಇತರರು ರೋಸಾರಿಯೋ ಚರ್ಚ್‌ನಿಂದ ಪೋಸ್ಟ್ ಆಫೀಸ್‌ವರೆಗೆ ಇರುವ ರಸ್ತೆಯಲ್ಲಿದ್ದ 5 ಪ್ರಮುಖ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿದರು. ಮಳೆಗಾಲ ಮುನ್ನ ನೀರಿನ ಹರಿವು ತಡೆಗಟ್ಟುತ್ತಿದ್ದ ಕಾಲುವೆಗಳನ್ನು ಶುದ್ಧಗೊಳಿಸಿ, ನೀರಿನ ಸರಾಗ ಹರಿವಿಗೆ ಅವಕಾಶ ಮಾಡಿಕೊಟ್ಟರು. ಎರಡೂ ತಂಡಗಳ ಒಟ್ಟಾರೆ ಶ್ರಮದಿಂದ ಸುಮಾರು 3000 ಕಿಲೋ ತಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.


ಶ್ರಮದಾನದ ಭಾಗವಾಗಿ, ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಅಧ್ಯಾಪಕರಾದ ಡಾ. ಪುರುಷೋತ್ತಮನ್ ಚಿಪ್ಪಳ, ಡಾ. ಜಯೇಶ್ ಚಂದ್ರನ್, ಡಾ. ರುಚಿಥಾ ನರಸಿಯಾ ಮತ್ತು ಸೋಕ್ರೇಟ್ಸ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂಸೇವಕರು ರೋಸಾರಿಯೋ ಚರ್ಚ್‌ನಿಂದ ಸೇಂಟ್ ಆನ್ಸ್ ಕಾಲೇಜುವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಕಸ ಸಂಗ್ರಹ, ಮರುಬಳಕೆ ಆಗದ ಪ್ಲಾಸ್ಟಿಕ್ ವಸ್ತುಗಳ ಸಂಗ್ರಹ, ಅನಧಿಕೃತ ಬ್ಯಾನರ್‌ಗಳ ತೆರವು, ಅಂಗಡಿ ಮಾಲೀಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅನಗತ್ಯ ಗಿಡಗಂಟುಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಿದರು.


ಅನಧಿಕೃತ ವಾಹನ ನಿಲುಗಡೆಗೆ ತಡೆಗೆ: ಮನವಿ


ಈ ಶ್ರಮದಾನದ ವೇಳೆ, ರೋಸಾರಿಯೋ ಹಾಲ್‌ನಿಂದ ಸ್ಟೇಟ್‌ಬ್ಯಾಂಕ್ ಸಂಪರ್ಕ ರಸ್ತೆಯವರೆಗೆ ಅನೇಕ ಲಾರಿಗಳು, ಕಾರುಗಳು ಮತ್ತು ಹಳೆಯ ವಾಹನಗಳನ್ನು ದೀರ್ಘಕಾಲ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಸಾರ್ವಜನಿಕ ರಸ್ತೆಯನ್ನು ಖಾಸಗಿ ಪಾಕಿಂಗ್ ಸ್ಥಳವಾಗಿ ಬಳಸಲಾಗುತ್ತಿದೆ. ಈ ರೀತಿಯ ಅನಧಿಕೃತ ಪಾಕಿಂಗ್‌ನಿಂದ ಕತ್ತಲು ಪ್ರದೇಶಗಳು ಉಂಟಾಗಿ, ಬ್ಲ್ಯಾಕ್ ಸ್ಪಾಟ್‌ಗಳು ರೂಪುಗೊಳ್ಳುತ್ತಿವೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗಬಹುದು. ಇದರಿಂದ ಪ್ರತಿದಿನ ಸಂಚರಿಸುವ ವಿದ್ಯಾರ್ಥಿಗಳು ಮತ್ತು ಮಕ್ಕಳ ಆರೋಗ್ಯ ಹಾಗೂ ಭದ್ರತೆಗೆ ಅಪಾಯ ಉಂಟಾಗಬಹುದು. ಇಂತಹ ಪಾಕಿಂಗ್‌ಗೆ ತಡೆ ನೀಡಿ ಅಥವಾ ಪೇ ಪಾಕಿಂಗ್ ವ್ಯವಸ್ಥೆ ಜಾರಿಗೊಳಿಸಿ, ಸಾರ್ವಜನಿಕ ಶಿಸ್ತಿನೊಂದಿಗೆ ಆದಾಯವೂ ಸೃಷ್ಟಿಯಾಗುವಂತೆ ಕ್ರಮ ಕೈಗೊಳ್ಳಬಹುದು ಎಂದು ಅಭಿಯಾನದ ಸ್ವಯಂಸೇವಕರು ನಗರ ಪಾಲಿಕೆಗೆ ಮನವಿ ಸಲ್ಲಿಸಲಿದ್ದಾರೆ.


ಈ ಕಾರ್ಯಕ್ರಮವನ್ನು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಹಾಗೂ ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ಈ ಸಮೂಹ ಪ್ರಯತ್ನವು ಸ್ವಚ್ಛ, ಆರೋಗ್ಯಕರ ಮತ್ತು ಜವಾಬ್ದಾರಿಯುತ ಮಂಗಳೂರನ್ನು ನಿರ್ಮಿಸುವತ್ತ ನಾಗರಿಕರನ್ನು ಪ್ರೇರೇಪಿಸುತ್ತಿದೆ.


ಎಂ.ಆರ್.ಪಿ.ಎಲ್. ಸಂಸ್ಥೆಯ ಕೇಶವ ಪಟ್ಟಾಳಿ, ನಿವೃತ್ತ ಸೇನಾನಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ದನೇಶ್ ಕುಮಾರ್, ಕಮಲಾಕ್ಷ ಪೈ, ದಿಲ್‌ರಾಜ್ ಆಳ್ವ, ರಂಜನ್ ಬೆಳ್ಳರ್ಪಾಡಿ ಉಪಸ್ಥಿತರಿದ್ದರು.








Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article