ಪ್ರಧಾನಿ ಮೋದಿ ಹೇಳಿಕೆ ನಾಚಿಕೆಗೇಡು: ಹರೀಶ್ ಕುಮಾರ್
Monday, May 11, 2026
ಮಂಗಳೂರು: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ, ವಾಹನಗಳಲ್ಲಿ ನಿಯಮಿತವಾಗಿ ಓಡಾಡಿ ಎಂದು ಕರೆ ನೀಡಿರುವುದು ನಾಚಿಕೆಗೇಡು. ಇದು ಕುಣಿಯಲಾಗದವ ಅಂಗಣ ಡೊಂಕು ಹೇಳಿದಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ದೇಶಾದ್ಯಂತ ವಾಣಿಜ್ಯ ಗ್ಯಾಸ್‌ಗಳ ದರ 993 ರೂ. ಏರಿಕೆ ಮಾಡಲಾಗಿದೆ. ದಿನಬಳಕೆ ವಸ್ತುಗಳು ದರ ಗಗನಕ್ಕೇರಿದೆ. ಒಂದೆಡೆ ಆತ್ಮ ನಿರ್ಭರ್ ಭಾರತ್, ವಾಹನ ಕೈಗಾರಿಕೆ, ಉದ್ಯಮ ವಲಯಕ್ಕೆ ಪ್ರೋತ್ಸಾಹಿಸಿ ಎಂದು ಪ್ರಧಾನಿ ಹೇಳುತ್ತಿದ್ದಾರೆ.
ಇನ್ನೊಂದೆಡೆ ವಾಹನಗಳನ್ನು ಮಿತವಾಗಿ ಬಳಸಿ ಹೇಳುತ್ತಿದ್ದಾರೆ. ಚಿನ್ನ ಖರೀದಿ ಮಾಡಬೇಡಿ ಎಂದು ಹೇಳಿಕೆ ನೀಡುವ ಮೂಲಕ ಸ್ವರ್ಣೋದ್ಯಮಕ್ಕೆ ದೊಡ್ಡ ಹೊಡೆತ ಬೀಳುವಂತೆ ಮಾಡುತ್ತಿದ್ದಾರೆ. ಈ ನಷ್ಟಕ್ಕೆ ಯಾರು ಹೊಣೆ? ದೇಶದ ಪ್ರಧಾನಿಯಾಗಿ ಈ ರೀತಿಯ ಹೇಳಿಕೆ ಶೋಭೆಯಲ್ಲ, ಬಾಲಿಶತನದ್ದು. ದೇಶವನ್ನು ಈಗಾಗಲೇ ಸಾಲದ ಕೂಪಕ್ಕೆ ತಳ್ಳಲಾಗಿದೆ, ಈಗ ಉದ್ಯಮ ವಲಯವನ್ನು ನಷ್ಟ ಮಾಡಿ ಮತ್ತಷ್ಟು ಬರೆ ಎಳೆಯುವ ಪ್ರಯತ್ನವಾಗಿದೆ. ಆಡಳಿತ ನಡೆಸಲು ಅಸಮರ್ಥರಾದವರು ಮಾತ್ರ ಈ ರೀತಿ ಹೇಳಿಕೆ ನೀಡಲು ಸಾಧ್ಯ ಎಂದು ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.