ಕರಾವಳಿಯಲ್ಲಿ ತಗ್ಗಿದ ಬಿಸಿಲ ತಾಪ: ಮುಂದಿನ ಕೆಲವು ದಿನ ಗುಡುಗು ಸಹಿತ ಮಳೆಯ ಮುನ್ಸೂಚನೆ
ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ವರುಣನ ಸಿಂಚನ ಸ್ವಲ್ಪ ಮಟ್ಟಿಗೆ ತಂಪು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹಗುರ ಮಳೆಯಾಗಿದ್ದು, ಶುಕ್ರವಾರವೂ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರಿದಿದೆ. ಶುಕ್ರವಾರ ಬೆಳಗ್ಗೆ ಮೋಡ ಕವಿದ ವಾತಾವರಣ ಇದ್ದು, ನಂತರ ನಿದಾನವಾಗಿ ಬಿಸಿಲ ಪ್ರಖರತೆ ಹೆಚ್ಚಾಗತಡಗಿದೆ. ಸಂಜೆ ವೇಳೆ ಮತ್ತೆ ಮೋಡ ಕವಿದಿತ್ತು, ಮುಂದಿನ 2-3 ದಿನ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಯ ಬೀಸುವ ಪ್ರಮಾಣ ಹೆಚ್ಚಳ, ಗುಡುಗು ಸಹಿತ ಮಿಂಚು ಅನುಭವವಾಗಲಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಳವಾಗುತ್ತಿದೆ. ಶನಿವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಹಗಲು ಬಿಸಿಲು, ಸೆಖೆ ಹೆಚ್ಚಿರುವುದರಿಂದ ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಿರಬಹುದು.
ಮಿಂಚು ಸಹಿತ ಮಳೆಯಾಗುವ ಸಾಧ್ಯತೆ
ಹವಾಮಾನ ಇಲಾಖೆಯ ಮಾಹಿತಿಯಂತೆ, ಶುಕ್ರವಾರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಗಳಲ್ಲಿ ದಾಖಲಾದ ಉಷ್ಣಾಂಶದ ಸರಾಸರಿ ಗರಿಷ್ಟ 34 ಡಿ.ಸೆ., 26 ಡಿ.ಸೆಲ್ಸಿ ಕನಿಷ್ಠ ಮಟ್ಟದಲ್ಲಿ ದಾಖಲಾಗಿದೆ. ಮೇ 10ರ ತನಕ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ:
ಬಂಗಾಳಕೊಲ್ಲಿಯಲ್ಲಿ ಮೇ 11ರಂದು ಸೃಷ್ಟಿಯಾಗಲಿರುವ ವಾಯುಭಾರ ಕುಸಿತವು ಇದೀಗ ತೀವ್ರ ಕುತೂಹಲ ಹಾಗೂ ಅನಿಶ್ಚಿತತೆಗೆ ಕಾರಣವಾಗಿದೆ. ಈ ಹವಾಮಾನ ವೈಪರೀತ್ಯವು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳ ಮೇಲೆ ನೇರ ಪರಿಣಾಮ ಬೀರಲಿದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಸೃಷ್ಟಿಯಾಗಿದ್ದು, ಹವಾಮಾನ ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ವಾಯುಭಾರ ಕುಸಿತದ ದಿಕ್ಕು ಮತ್ತು ತೀವ್ರತೆಯು ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ, ಕರಾವಳಿ ಭಾಗದಲ್ಲಿ ಹವಾಮಾನದ ಏರಿಳಿತ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತಿತಗೊಂಡು ಭೂಭಾಗದ ಕಡೆಗೆ ಚಲಿಸಿದರೆ, ಸಮುದ್ರದಿಂದ ತೇವಾಂಶಭರಿತ ಗಾಳಿಯನ್ನು ಸೆಳೆಯುವ ಕಾರಣ ಕರಾವಳಿಯಲ್ಲಿ ಮೋಡಕವಿದ ವಾತಾವರಣ ಉಂಟಾಗಬಹುದು. ಇದರಿಂದ ಬಿಸಿಲಿನ ತಾಪಮಾನದಲ್ಲಿ ತಾತ್ಕಾಲಿಕ ಇಳಿಕೆಯಾಗುವ ಸಾಧ್ಯತೆಯಿದೆ.
ಮಳೆಯ ಮುನ್ಸೂಚನೆ:
ಈಗಿನ ಅಂದಾಜಿನ ಪ್ರಕಾರ, ಬಂಗಾಳಕೊಲ್ಲಿಯ ಈ ಸಿಸ್ಟಮ್ ಕರಾವಳಿಯಿಂದ ದೂರ ಸರಿದರೆ ಮಳೆಯ ಪ್ರಮಾಣ ತಗ್ಗಬಹುದು. ಆದರೆ, ವಾತಾವರಣದ ಒತ್ತಡದಲ್ಲಿ ಬದಲಾವಣೆಯಾದಲ್ಲಿ ಮೇ 11ರ ನಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಒಟ್ಟಾರೆಯಾಗಿ, ಮುಂದಿನ 48 ಗಂಟೆಗಳ ಕಾಲ ಕರಾವಳಿಯ ಹವಾಮಾನವು ಅಸ್ಥಿರತೆಯಿಂದ ಕೂಡಿರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.