ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಮೇ. 29ರಂದು  ಮೂಡುಬಿದಿರೆಯಲ್ಲಿ ಪ್ರತಿಭಟನಾ ಸಭೆ

ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಮೇ. 29ರಂದು ಮೂಡುಬಿದಿರೆಯಲ್ಲಿ ಪ್ರತಿಭಟನಾ ಸಭೆ


ಮೂಡುಬಿದಿರೆ: ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಮೇ 29ರಂದು ಮೂಡುಬಿದಿರೆಯಲ್ಲಿ ಕಿಸಾನ್ ಸಂಘದಿಂದ ಬೃಹತ್ ರೈತ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಪ್ರಮುಖರಾದ ಜಾಯ್ಲಸ್ ಡಿಸೋಜ ತಿಳಿಸಿದರು. 

ಅವರು ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪ್ರತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಸರಕಾರದ ನೀತಿಯಿಂದಾಗಿ ಕೃಷಿಕರ ಬದುಕು ದುಸ್ತರಗೊಂಡಿದ್ದು, ಹೈನುಗಾರಿಕೆ ಉತ್ಪನ್ನಗಳಿಗೆ ಮೌಲ್ಯಾಧಾರಿತ ಬೆಲೆ ನಿಗದಿ ಹಾಗೂ ಅಕ್ರಮ-ಸಕ್ರಮ ಕಾಯ್ದೆಯ ಸರಳೀಕರಣಕ್ಕೆ ಈ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಲಾಗುವುದು.

ಕೂಲಿಯಾಳುಗಳ ಸಮಸ್ಯೆ ಮತ್ತು ಗಗನಕ್ಕೇರಿರುವ ಉತ್ಪಾದನಾ ವೆಚ್ಚದ ನಡುವೆ ಹೈನುಗಾರಿಕೆ ನಡೆಸುವುದು ಕಷ್ಟಸಾಧ್ಯವಾಗಿದೆ. ಪ್ರಸ್ತುತ ಸರ್ಕಾರ ನೀಡುತ್ತಿರುವ 42 ರೂಪಾಯಿ ಬೆಲೆಯು ಕನಿಷ್ಠ ವೆಚ್ಚವನ್ನೂ ಭರಿಸುತ್ತಿಲ್ಲ. ಆದ್ದರಿಂದ ಪ್ರತಿ ಲೀಟರ್ ಹಾಲಿಗೆ 65 ರೂಪಾಯಿ ಮೂಲ ಬೆಲೆ ನಿಗದಿಪಡಿಸಬೇಕು ಹಾಗೂ 15 ರೂಪಾಯಿ ಪ್ರೋತ್ಸಾಹಧನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಅಕ್ರಮ-ಸಕ್ರಮ ಕಾಯ್ದೆ ತಿದ್ದುಪಡಿ ತರಲು ಆಗ್ರಹ:

ರಾಜ್ಯ ಸರ್ಕಾರ ಅಕ್ರಮ-ಸಕ್ರಮ ಕಾಯ್ದೆಗೆ ತಂದಿರುವ ತಿದ್ದುಪಡಿಗಳಿಂದಾಗಿ ಕೃಷಿಕರಿಗೆ ಭೂಮಿ ಮಂಜೂರು ಮಾಡಿಸಿಕೊಳ್ಳಲು ತೊಂದರೆಯಾಗಿದೆ. ಪುರಸಭಾ ವ್ಯಾಪ್ತಿಯ ಗಡಿಯಿಂದ ಟವರ್ ಲೋಕೇಶನ್ ಪ್ರಕಾರ 3 ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ಆಸ್ತಿ ಮಂಜೂರು ಮಾಡಬಾರದು ಎಂಬ ನಿಯಮದಿಂದಾಗಿ ಮೂಡುಬಿದಿರೆ ತಾಲೂಕಿನ ಪುಚ್ಚಮೊಗರು ಸೇರಿದಂತೆ ಹಲವು ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಈ ನಿಯಮವನ್ನು ಬದಲಾಯಿಸಬೇಕು ಮತ್ತು ಡೀಮ್ಡ್ ಫಾರೆಸ್ಟ್ ಜಾಗದಲ್ಲಿ ಕೃಷಿ ಮಾಡುತ್ತಿರುವ ರೈತರಿಗೂ ಭೂಮಿ ಮಂಜೂರು ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಲಾಯಿತು. ಪ್ರಕೃತಿ ವಿಕೋಪದಿಂದ ಕೃಷಿ ನಾಶವಾದಾಗ ಪ್ರತಿ ಅಡಿಕೆ ಮರಕ್ಕೆ 20,000 ರೂಪಾಯಿ ಹಾಗೂ ತೆಂಗು ಮತ್ತು ರಬ್ಬರ್ ಗಿಡಕ್ಕೆ 25,000 ರೂಪಾಯಿ ವೈಜ್ಞಾನಿಕ ಪರಿಹಾರ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿ ಲೀಟರ್ ಹಾಲಿಗೆ 65 ರೂಪಾಯಿ ದರ ನಿಗದಿ ಹಾಗೂ ಕುಮ್ಕಿ ಆಸ್ತಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಮೇ 29ರಂದು ಬೆಳಿಗ್ಗೆ 10:00 ಗಂಟೆಗೆ ಮೂಡುಬಿದಿರೆ ಶಾಮಿಲಿ ಎನ್‌ಕ್ಲೇವ್  ಕಚೇರಿ ಬಳಿಯಿಂದ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ವಕೀಲ, ರೈತ ಹೋರಾಟಗಾರ ಶಾಂತಿ ಪ್ರಸಾದ್ ಹೆಗ್ಡೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. 

ಸಂಘಟನೆಯ ಪ್ರಮುಖರಾದ  ಪ್ರವೀಣ್ ಭಂಡಾರಿ ಮತ್ತು ವಲೇರಿಯನ್ ಕುಟಿನ್ಹೊ, ವಸಂತ್ ಭಟ್ ಪಯ್ಯಾಡಿ, ರಾಧಾಕೃಷ್ಣ ಶೆಟ್ಟಿ, ವೆಂಕಟೇಶ್ ಕೋಟ್ಯಾನ್, ನೇಮಿರಾಜ್  ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article