ಜೂನ್ 3 ಕ್ಕೆ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಫಲಿತಾಂಶ
ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ 2025ರ ಜುಲೈ 10ರಂದು ಚುನಾವಣೆ ನಡೆದಿತ್ತು. ಆದರೆ ಸಂಘದ ಉಪನಿಯಮಾವಳಿ ಹಾಗೂ ಮತದಾನದ ಪ್ರಕ್ರಿಯೆಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆಗೆ ತಡೆ ವಿಧಿಸಲಾಗಿತ್ತು. ಆಡಳಿತಾಧಿಕಾರಿಗಳ ಅವಧಿಯಲ್ಲೇ ಚುನಾವಣೆ ನಡೆದಿದ್ದರೂ, ಕಾನೂನು ಹೋರಾಟದ ಕಾರಣದಿಂದ ಫಲಿತಾಂಶವನ್ನು ಕಾಯ್ದಿರಿಸಲಾಗಿತ್ತು.
ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯವು ನೀಡಿದ ಆದೇಶದಂತೆ, ಜೂನ್ 3ರಂದು ಮಧ್ಯಾಹ್ನ 11.30ಕ್ಕೆ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಅಧಿಕೃತವಾಗಿ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದಾಖಲಾಗಿದ್ದ ದಾವೆ ಪ್ರಕರಣದ ವಿಚಾರಣೆ ಪೂರ್ಣಗೊಂಡು, ಮೇ 25ರಂದು ಅಂತಿಮ ಆದೇಶ ಹೊರಬಿದ್ದಿದ್ದು ನ್ಯಾಯಾಲಯದ ಈ ಮಹತ್ವದ ಆದೇಶದ ಹಿನ್ನೆಲೆಯಲ್ಲಿ, ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ರಿಟರ್ನಿಂಗ್ ಅಧಿಕಾರಿ ಜೂನ್ 3ರಂದು ಫಲಿತಾಂಶ ಘೋಷಣೆಗೆ ದಿನ ನಿಗದಿ ಪಡಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳು ಅಂದು ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.