ಅಪಘಾತ ವಲಯ ಬನ್ನಡ್ಕ ರಸ್ತೆ ಪರಿಶೀಲನೆಗೈದ ಪೊಲೀಸ್, ರಾ.ಹೆ. ಮೇಲಾಧಿಕಾರಿಗಳು

ಅಪಘಾತ ವಲಯ ಬನ್ನಡ್ಕ ರಸ್ತೆ ಪರಿಶೀಲನೆಗೈದ ಪೊಲೀಸ್, ರಾ.ಹೆ. ಮೇಲಾಧಿಕಾರಿಗಳು


ಮೂಡುಬಿದಿರೆ: ಕಳೆದ ಒಂದು ತಿಂಗಳಿನಿಂದ ಅತೀ ಹೆಚ್ಚು ರಸ್ತೆ ಅಪಘಾತಗಳಾಗಿ ಪ್ರಾಣಹಾನಿಗಳಾಗಿರುವ ಬನ್ನಡ್ಕ ಪ್ರದೇಶಕ್ಕೆ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಜಂಟಿ ಸ್ಥಳ ಪರಿಶೀಲನೆ ನಡೆಸಿದರು. 

ಪರಿಶೀಲನೆಯ ಸಂದರ್ಭದಲ್ಲಿ ಡಿಸಿಪಿ ರವಿಶಂಕರ್ ಕೆ., ಎಸಿಪಿ ಶ್ರೀಕಾಂತ್, ತಹಶೀಲ್ದಾರ್ ಶ್ರೀಧರ ಮುಂದಲಮನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಮಂಗಳೂರು ಬಿಕರ್ನಕಟ್ಟೆಯಿಂದ ಕಾರ್ಕಳ ಸಮೀಪದ ಸಾಣೂರಿನವರೆಗೆ ಇರುವ ಎನ್‌ಎಚ್-169 ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ, ಕುಡುಪು ಕಟ್ಟೆಯಿಂದ ಬಾರಾಡಿ ಕ್ರಾಸ್–ಕಾರ್ಕಳ ಗಡಿ ತನಕ ಸುಮಾರು 35 ಕಿ.ಮೀ. ವ್ಯಾಪ್ತಿಯ ಹೊಸ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ  ಪರಿಶೀಲನೆ ನಡೆಸಲಾಯಿತು ಎಂದು ಮಂಗಳೂರು ಟ್ರಾಫಿಕ್ ಪೊಲೀಸ್ ಅಧಿಕೃತ ಪ್ರಕಟಣೆ ತಿಳಿಸಿದೆ.

ಪರಿಶೀಲನೆ ವೇಳೆ ಅಪಘಾತ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳನ್ನು ಗುರುತಿಸಿ, ಪ್ರತಿಯೊಂದು ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಯಿತು. ಸ್ಥಳೀಯ ನಿವಾಸಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸಲು ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಲಾಯಿತು. ಸಂಬಂಧಿತ ಇಲಾಖೆಗಳು ಈ ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಗುರುತಿಸಲಾದ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article