ನೃತ್ಯೋಪಾಸನಾ ಅಕಾಡೆಮಿಯ ಭಾರತಿ ಎಂ. ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ
ಇಲ್ಲಿವರೆಗೆ ಅಕಾಡೆಮಿಯ ಇಬ್ಬರು ವಿದ್ಯಾರ್ಥಿಗಳು ‘ಬಿ’ ಗ್ರೇಡ್ ಕಲಾವಿದರಾಗಿ ಆಯ್ಕೆಯಾದಂತಾಗಿದೆ.
ಬೆಂಗಳೂರು ದೂರದರ್ಶನ ಕೇಂದ್ರ 2025 ನವೆಂಬರ್‌ನಲ್ಲಿ ನಡೆಸಿದ ಭರತನಾಟ್ಯ ವಿಭಾಗದ ಆಡಿಷನ್‌ಗೆ ಹಾಜರಾದ ಭಾರತಿ ಎಂ. ಅವರು ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರಲ್ಲಿ ಕಳೆದ 11 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತಿ ಎಂ. ದೂರದರ್ಶನದ ಆಡಿಷನ್‌ಗೆ ಹಾಜರಾಗಿದ್ದರು.
ತನ್ನ 10ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಕೆಯನ್ನು ಪ್ರಾರಂಭಿಸಿ ಇತ್ತೀಚೆಗೆ ವಿದ್ವತ್ ಪೂರ್ವ ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ನೃತ್ಯಾಭ್ಯಾಸದ ಜೊತೆಗೆ, ಗುರು ವಿದ್ವಾನ್ ಶ್ರೀಕಾಂತ್ ಕುದುಮಾರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಧ್ಯಯನ ಮಾಡಿರುವ ಭಾರತಿ, ಸಂಗೀತದ ಜೂನಿಯರ್ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.
ಭಾರತಿ ಎಂ. ಅವರು 60ಕ್ಕೂ ಹೆಚ್ಚು ಸಮೂಹದ ಜೊತೆಗೆ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾರೆ.
ಕಡಬ ಬಳಿಯ ಕನಕವನ ನಿವಾಸಿ ಎಂ. ಮಾಧವ ಭಟ್ ಹಾಗೂ ಗಾಯತ್ರಿ ದಂಪತಿಯ ಪುತ್ರಿಯಾದ ಈಕೆ ಪ್ರಸ್ತುತ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಈಕೆ ಫೆಬ್ರವರಿಯಲ್ಲಿ ಪುತ್ತೂರಿನಲ್ಲಿ ತೆರೆದ ವೇದಿಕೆಯಲ್ಲಿ ಭರತನಾಟ್ಯ ರಂಗಪ್ರವೇಶವನ್ನು ಯಶಸ್ವಿಯಾಗಿ ನಡೆಸಿದ್ದರು.