‘ಅಂಬೇಡ್ಕರ್ ವೃತ್ತ ನಿರ್ಮಾಣ ಬೇಡಿಕೆ ಕಡೆಗಣನೆ’

‘ಅಂಬೇಡ್ಕರ್ ವೃತ್ತ ನಿರ್ಮಾಣ ಬೇಡಿಕೆ ಕಡೆಗಣನೆ’

ಮಂಗಳೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವೃತ್ತ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗಿದೆ. ನಗರದಲ್ಲಿ ಅದೆಷ್ಟು ವೃತ್ತಗಳು ನಿರ್ಮಾಣಗೊಂಡರೂ ಅಂಬೇಡ್ಕರ್ ವೃತ್ತದ ಬಗ್ಗೆ ಅಸಡ್ಡೆ ವಹಿಸಲಾಗಿದೆ. ಜಿಲ್ಲಾಡಳಿತ ಮತ್ತು ಪಾಲಿಕೆಗೆ ಸಾಧ್ಯವಾಗದಿದ್ದರೆ ನಾವೇ ನಿರ್ಮಾಣ ಮಾಡುತ್ತೇವೆ ಎಂಬ ಆಗ್ರಹ ದಲಿತ ಮುಖಂಡರಿಂದ ವ್ಯಕ್ತವಾಗಿದೆ.

ಶುಕ್ರವಾರ ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾದ ಮಂಗಳೂರು ಮತ್ತು ಉಳ್ಳಾಲ ತಾಲೂಕು ಮಟ್ಟದ ಎಸ್‌ಸಿ ಎಸ್‌ಟಿ ಕುಂದುಕೊರತೆ ಆಲಿಕೆ ಸಭೆಯಲ್ಲಿ ದಲಿತ ಮುಖಂಡ ದಿನೇಶ್ ಮೂಳೂರು ಈ ವಿಷಯ ಪ್ರಸ್ತಾವಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ಈ ಹಿಂದೆ ಇದ್ದ ಪೊಲೀಸ್ ಚೌಕಿಯಲ್ಲಿ ಅಂಬೇಡ್ಕರ್ ವೃತ್ತ ಎಂದು ಬರೆಯಲಾಗಿತ್ತು. ಈಗ ಅದನ್ನು ತೆಗೆದು ಹೊಸ ಚೌಕಿ ಇಡಲಾಗಿದೆ. ಆದರೆ ಅದರಲ್ಲಿ ಅಂಬೇಡ್ಕರ್ ವೃತ್ತದ ಬಗ್ಗೆ ಉಲ್ಲೇಖವಿಲ್ಲ. ಪೊಲೀಸ್ ಇಲಾಖೆ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಜಿನ್ನಪ್ಪ ಬಂಗೇರ ಎಂಬವರು ಆಗ್ರಹಿಸಿದರು.

ಪರಿಶಿಷ್ಟ ಸಮುದಾಯದವರು ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು, ದಲಿತ ಕಾಲನಿಗಳಿಗೆ ಭೇಟಿ ನೀಡಿ ಸರಕಾರದಿಂದ ದೊರೆಯುವ

ಆರೋಗ್ಯ ಕಾರ್ಡ್ ಮಾಡಿಸಿದರೆ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ದಲಿತ ಮುಖಂಡ ಅನಿಲ್ ಕುಮಾರ್ ಮನವಿ ಮಾಡಿದರು.

ಆರೋಗ್ಯ ಕಾರ್ಡ್‌ಗಳನ್ನು ಮಾಡಿಸುವುದು ಹೇಗೆ ಎನ್ನುವುದೂ ತಿಳಿದಿಲ್ಲ. ಕಾಲನಿಗಳಿಗೆ ಭೇಟಿ ನೀಡಿ ಶಿಬಿರಗಳನ್ನು ಆಯೋಜಿಸಿದರೆ ಉತ್ತಮ ಎಂದರು.

ಹಾಸ್ಟೆಲ್‌ಗಳಿಗಾಗಿ ಅರ್ಜಿ ಸಲ್ಲಿಸಿದ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದೊರಕಲಿದೆಯೇ ಎಂಬ ದಲಿತ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್ ಅಡಿಗ, ಪ್ರಸ್ತುತ ಹಾಸ್ಟೆಲ್‌ಗಳ ಕೊರತೆ ಇದೆ. ಬಾಡಿಗೆ ಕಟ್ಟಡಗಳು  ಸಿಗುತ್ತಿಲ್ಲ. ಇತ್ತೀಚೆಗೆ ಕದ್ರಿಯಲ್ಲಿ ಹಾಸ್ಟೆಲ್ ಉದ್ಘಾಟನೆಯಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಬಳಿ ೫೦೦ ವಿದ್ಯಾರ್ಥಿಗಳ ಸಾಮರ್ಥ್ಯದ ಕಟ್ಟಡ ನಿರ್ಮಾಣ ಆಗುತ್ತಿದ್ದು, ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಿಂದ ದೊಡ್ಡ ಸಮಸ್ಯೆ ಬಗೆಹರಿಯಲಿದೆ. ಬಿಸಿಎಂ ಹಾಸ್ಟೆಲ್‌ಗಳಲ್ಲಿ ಶೇ.25ರಷ್ಟು ಎಸ್‌ಸಿ ಕೋಟಾ ಇದೆ.

ಸಾಧ್ಯವಾದಷ್ಟು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಗೆ ದಾಖಲಾತಿ ಮಾಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದರು.

ಕುದ್ಮುಲ್ ಸಮಾಧಿ ಸ್ಥಳ ಅಭಿವೃದ್ಧಿ ವಿಳಂಬ..

ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳದ ಅಭಿವೃದ್ದಿ ವಿಳಂಬವಾಗುತ್ತಿರುವ ಬಗ್ಗೆ ಮುಖಂಡರು ಅಸಮಾಧಾನ ವ್ಯಕ್ತ ಪಡಿಸಿದರು. ಸ್ಥಳದಲ್ಲಿರುವ ಮರಗಳ ತೆರವಿನ ಬಗ್ಗೆ ಅರಣ್ಯ ಇಲಾಖೆಯ ತಕರಾರಿಗೆ ರಘುವೀರ ಬಾಬುಗುಡ್ಡೆ ಆಕ್ಷೇಪಿಸಿದರು. ಜಿಲ್ಲಾಧಿಕಾರಿಯವರು ಕಾಮಗಾರಿ ನಡೆಸಲು ಆದೇಶ

ನೀಡಿದ್ದೇವೆ ಎಂದು ಹೇಳಿದ್ದರು. ಆದರೂ ಕಾಮಗಾರಿ ಆರಂಭವಾಗಿಲ್ಲ ಎಂದು ರಘುರಾಜ ಕದ್ರಿ ಆಕ್ಷೇಪಿಸಿದರೆ, ಸಮಾಧಿ ಸ್ಥಳ ಅಭಿವೃದ್ಧಿ ವಿಳಂಬವಾಗಿ ತೊಂದರೆ ಆಗುತ್ತಿದೆ ಎಂದು

ದಿನೇಶ್ ಮೂಳೂರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ತಿಳಿಸಿದರು.

ಉಳ್ಳಾಲ ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article