ಟ್ಯಾಂಕರ್-ಬೈಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು
ಪುತ್ತೂರು: ಸುಬ್ರಹ್ಮಣ್ಯ–ಮಂಜೇಶ್ವರ ಹೆದ್ದಾರಿಯ ಸವಣೂರು ಸಮೀಪದ ಚಾಪಳ್ಳ ತಿರುವಿನಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಪುತ್ತೂರು ಆಸ್ಪತ್ರೆಗೆ ಕರೆತರುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಇನ್ನೊಂದು ಬೈಕ್ ನಲ್ಲಿ ಹಿಂಬದಿಯಿಂದ ಬರುತ್ತಿದ್ದವರಿಗೂ ಕೂಡ ಗಾಯಗಳಾಗಿವೆ ಎಂದು ಮಾಹಿತಿ ಲಭಿಸಿದೆ.
ಬಂಟ್ವಾಳ ತಾಲೂಕಿನ ಮಿತ್ತೂರು ಬೊಳ್ಳರಮಜಲು ನಿವಾಸಿ ಪುರಂದರ ಎಂಬವರ ದ್ವಿತೀಯ ಪುತ್ರ ಯಜ್ನೇಶ್ (21) ಹಾಗೂ ಆರ್ಲಪದವು ನೋಣಯ್ಯ ಭರಣ್ಯ ಎಂಬವರ ಪುತ್ರ ಜಗನ್(20) ಮೃತಪಟ್ಟ ಯುವಕರು. ಜಗನ್ ಪುತ್ತೂರಿನ ಅಕ್ಷಯ ಕಾಲೇಜಿನ ಅಂತಿಮ ಪದವಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದಾನೆ. ಇತ್ತೀಚೆಗೆ ಇಂಟರ್ನ್ ಶಿಪ್ ಗೆ ಆಸ್ಟ್ರೇಲಿಯಾಗೆ ತೆರಳಿ ಕೆಲದಿನಗಳ ಹಿಂದೆ ತವರಿಗೆ ಆಗಮಿಸಿದ್ದರು.
ಈ ಇಬ್ಬರು ಯುವಕರು ಕಡಬ ತಾಲೂಕಿನ ಆಲಂಗಾರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಇಂದು ಸಂಜೆ 5 ಗಂಟೆ ಸುಮಾರಿಗೆ ವಾಪಸ್ಸು ಮನೆಗೆ ಮರಳುತ್ತಿದ್ದಾಗ, ಚಾಪಳ್ಳ ತಿರುವಿನಲ್ಲಿ ಎದುರಿನಿಂದ ಬಂದ ಮುಗೆರೋಡಿ ಕನ್ಸೆಕ್ಷನ್‌ಗೆ ಸೇರಿದ ನೀರಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ಅಲಂಕಾರಿನಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ಸವಣೂರು ಕಡೆಯಿಂದ ನೀರು ಪೂರೈಸುತ್ತಿದ್ದ ಟ್ಯಾಂಕರ್ ಚಾಲಕ, ಸ್ಕೂಟರ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ವಾಹನವನ್ನು ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆಯೆ ಬೈಕ್ ಟ್ಯಾಂಕರ್‌ನ ಚಕ್ರದ ಅಡಿಗೆ ಸಿಲುಕಿದ ಪರಿಣಾಮ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಸಂದರ್ಭದಲ್ಲೇ ನಿಯಂತ್ರಣ ತಪ್ಪಿದ ಟ್ಯಾಂಕರ್ 90 ಡಿಗ್ರಿ ತಿರುಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ.
ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಅದೇ ಹಾದಿಯಲ್ಲಿ ಬರುತ್ತಿದ್ದ ಮತ್ತೊಂದು ಬೈಕ್ ಸವಾರರು ಅಪಘಾತವನ್ನು ಕಂಡು ಗಾಬರಿಯಿಂದ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗಿದೆ. ಈ ಘಟನೆಯಲ್ಲಿ ಬೈಕ್‌ನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಿಂದಾಗಿ ಸ್ಥಳದಲ್ಲಿ ವಾಹನ ಸಂಚಾರವನ್ನು ವ್ಯತ್ಯಯ ಉಂಟಾಗಿದ್ದು. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ, ಮೊಕದ್ದಮೆ ದಾಖಲಾಗಿದೆ. ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಮನೆಯವರಿಗೆ ಮೃತದೇಹವನ್ನ ಬಿಟ್ಟುಕೊಡಲಾಗಿದೆ. ಆಸ್ಪತ್ರೆ ಬಳಿ ಮೃತರ ಕುಟುಂಬಸ್ಥರ ಆಕಂದ್ರಣ ಮುಗಿಲು ಮುಟ್ಟಿತ್ತು. ಅಲ್ಲದೇ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.