‘ಸಿರಿ’ಯ ಮೂಲಕ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವುದು ಸ್ತುತ್ಯಾರ್ಹ: ಸಿ.ಪಿ. ರಾಧಾಕೃಷ್ಣನ್
ಅವರು ಮೇ.31 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಳ ‘ಸಿರಿ’ ಸಂಸ್ಥೆಯ ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕನ್ನು ಉದ್ಘಾಟಿಸಿ ಮಾತನಾಡಿ, ಸರ್ವಧರ್ಮೀಯರನ್ನೂ, ಎಲ್ಲಾ ಜಾತಿಯವರನ್ನೂ ಸಮಾನತೆ ಮತ್ತು ಗೌರವಭಾವದಿಂದ ಪರಿಗಣಿಸಿ ಸಾಮಾಜಿಕ ಸಾಮರಸ್ಯದೊಂದಿಗೆ ಅವರು ಮಾಡುತ್ತಿರುವ ಸೇವೆ ಆದರ್ಶ, ಅನುಕರಣೀಯ ಹಾಗೂ ಅನುಸರಣೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಜಿಯವರ ‘ಆತ್ಮನಿರ್ಭರ ಭಾರತ’ ತತ್ವದ ನೆಲೆಯಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರುಡ್‌ಸೆಟ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ‘ಸಿರಿ’ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನಮ್ಮ ಸಂಘಟಿತ ಪ್ರಯತ್ನ, ಪರಿಶ್ರಮ ಮತ್ತು ಕನಸುಗಳ ಪ್ರತೀಕವಾಗಿದೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಎಂದರೆ ಕೇವಲ ಮನೆಯ ಸದಸ್ಯೆ ಅಲ್ಲ. ಸಮಾಜವನ್ನು ಉಳಿಸುವ ಶಕ್ತಿ. ‘ಮಾತೃಶ್ರೀ’ ಅಂದರೆ ತಾಯಿತನ, ತ್ಯಾಗ, ಶಕ್ತಿ ಮತ್ತು ಕರುಣೆಗೆ ಸಲ್ಲಿಸುವ ಗೌರವ. ಈ ಕೈಗಾರಿಕಾ ಪಾರ್ಕ್‌ಗೆ ಬರುವ ಪ್ರತಿ ಮಹಿಳೆಯೂ ಕಾರ್ಮಿಕಳಲ್ಲ ಅವಳು ಸೃಷ್ಟಿಕರ್ತೆ, ಪೋಷಕಳು ಮತ್ತು ದೇಶದ ಅಮೂಲ್ಯ ಶಕ್ತಿ. ‘ಸಿರಿ’ಯನ್ನು ಲಾಭರಹಿತ ಸೇವಾಸಂಸ್ಥೆಯಾಗಿ ರೂಪಿಸಿದ್ದು, ಕಚ್ಛಾವಸ್ತುಗಳನ್ನು ಪೂರೈಸಿ ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗಳನ್ನು ತಲುಪುವಂತೆ ಸಂಪರ್ಕ ನಿರ್ಮಿಸಲಾಯಿತು. ಹಾಗಾಗಿ ಇದು ಮಹಿಳಾ ಆರ್ಥಿಕ ಸಬಲೀಕರಣದ ಚಳುವಳಿಯಾಗಿ ಬೆಳೆದಿದೆ ಎಂದರು.