ಉಜಿರೆ ಎಸ್.ಡಿ.ಎಂ. ಐ.ಟಿ. ಕಾಲೇಜು: ವಿಟಿಯು ಅಂತರ್ ವಲಯ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ
ಸಭಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ರವೀಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಕಬಡ್ಡಿ ದೇಶಿಯ ಕ್ರೀಡೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯನ್ನು ಹವ್ಯಾಸವಾಗಿ ರೂಪಿಸಿಕೊಂಡು ನಿರಂತರ ಆಸಕ್ತಿ ಮತ್ತು ಪರಿಶ್ರಮದಿಂದ ಸಾಗಿದರೆ ಕಬಡ್ಡಿಯಂತಹ ಕ್ರೀಡೆಗಳಲ್ಲಿ ಭವಿಷ್ಯವನ್ನು ಕಂಡುಕೊಳ್ಳಬಹುದು. ಕಬಡ್ಡಿಗೆ ಇಂದು ಪ್ರೋ ಕಬಡ್ಡಿ ಬಳಿಕ ಜಗದ್ವ್ಯಾಪಿ ಮನ್ನಣೆ ದೊರೆಯುತ್ತಿರುವ ಜೊತೆಗೆ ವಿಫುಲವಾದ ಅವಕಾಶಗಳು ತೆರೆದುಕೊಂಡಿದೆ. ಕಬಡ್ಡಿ ಕ್ರೀಡೆ ಮತ್ತಷ್ಟು ಜಾಗತಿಕ ಮಟ್ಟದಲ್ಲಿ ಬೆಳಗಲು ಪ್ರತಿಯೊಬ್ಬ ಕಬಡ್ಡಿ ಕ್ರೀಡಾ ಪಟುವಿನ ಕೊಡುಗೆ ಅಗತ್ಯವಿದೆ. ಪ್ರತಿಭೆ ಹಾಗೂ ಸ್ವ-ಸಾಮಾರ್ಥ್ಯದಿಂದ ಸಾಧನೆಯತ್ತ ಹೆಜ್ಜೆ ಹಾಕಿದರೆ ವಿದ್ಯಾಸಂಸ್ಥೆ ಮತ್ತು ಸಮಾಜ ನಮ್ಮ ಕಲೆಯನ್ನು ಗುರುತಿಸಿ ಗೌರವಿಸುತ್ತದೆ. ಕ್ರೀಡಾ ಪಟುಗಳು ತಮ್ಮ ಬದುಕಿನುದ್ದಕ್ಕೂ ಶಿಸ್ತಿನ ಚೌಕಟ್ಟನ್ನು ಮೀರಬಾರದು ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಮತ್ತೊರ್ವ ಅತಿಥಿ ಬೆಳ್ತಂಗಡಿ ವಿಭಾಗದ ಡೆಪ್ಯುಟಿ ರೇಂಜ್ ಅರಣ್ಯ ಅಧಿಕಾರಿ ರಂಜಿತ್ ಕುಮಾರ್ ಎಸ್. ಮಾತನಾಡಿ, ಕ್ರೀಡಾ ಪಟುಗಳು ಎದುರಾಗುವ ಸೋಲುಗಳಿಗೆ ಚಿಂತಿತರಾಗಬಾರದು. ಕ್ಷಣಿಕ ಸೋಲನ್ನು ಮರೆತು ಯಶಸ್ಸಿನ ಹಾದಿಯೆಡೆಗೆ ಹಪಹಪಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸ್ವಶಕ್ತಿ ಮತ್ತು ಪ್ರತಿಭೆಯ ಜೊತೆಗೆ ನಿರಂತರ ಪ್ರಯತ್ನದಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಮಾತನಾಡಿ, ಕಬಡ್ಡಿ ಕ್ರೀಡೆ ವಿಶೇಷ ಸಾಮರ್ಥ್ಯ ಮತ್ತು ಕೌಶಲ್ಯದಿಂದ ಸಾಗಿಬರುವ ಆಟ. ಕ್ರೀಡೆಯ ಮೇಲಿನ ಆಸಕ್ತಿಯೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ಶುಭ ಹಾರೈಸಿದರು.
ಅಂತರ್ ವಲಯಗಳ ಅಂತರ್ ಕಾಲೇಜು ರಾಜ್ಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯದ ಬೆಂಗಳೂರು, ಬೆಳಗಾವಿ, ಕಲಬುರ್ಗಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು ೧೬ ತಂಡಗಳು ಭಾಗವಹಿಸಿದ್ದವು.
ವೇದಿಕೆಯಲ್ಲಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರರಾದ ಕೃಷ್ಣಾನಂದ್ ರಾವ್ ಹಾಗೂ ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ತಂಡಗಳು ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಾದ ಕಲ್ಪಿತ ಹಾಗೂ ಅನಿಶ್ ಕಲ್ಮಾಡಿ ನಿರೂಪಿಸಿ, ವಂದಿಸಿದರು. ಪುರುಷರ ಕಬಡ್ಡಿ ಪಂದ್ಯಾಟವನ್ನು ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಭಾಕರ್ ಸಂಯೋಜಿಸಿ, ತಾಂತ್ರಿಕ ಮಹಾವಿದ್ಯಾಲಯ ಉಪನ್ಯಾಸಕರು ಸಹಕರಿಸಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ವಿಶೇಷ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ. ಕಳೆದ ಅನೇಕ ವರ್ಷಗಳಿಂದ ಹಲವು ಕ್ರೀಡಾ ಪಟುಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಬೆಳೆಸಿದೆ. ವಿಶೇಷವಾಗಿ ಕಬಡ್ಡಿ ಕ್ಷೇತ್ರದ ಪ್ರೋ ಕಬ್ಬಡಿ ಪಂದ್ಯಾಟಕ್ಕೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಿಂದ ಆರು ಜನ ಕ್ರೀಡಾ ಪಟುಗಳನ್ನು ನೀಡಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಮತ್ತಷ್ಟು ಕ್ರೀಡಾ ಪಟುಗಳು ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ. -ರವೀಂದ್ರ ಶೆಟ್ಟಿ, ಅಂತಾರಾಷ್ಟ್ರೀಯ ತರಬೇತುದಾರ.