ರಸ್ತೆ ಕಾಮಗಾರಿ ವಿಚಾರ: ಬಾವಿಗಿಳಿದು ಪ್ರತಿಭಟನೆ
ಕೋಟೆಕಾರ್ ಪ.ಪಂ. ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ರಸ್ತೆಗೆ ಅಧ್ಯಕ್ಷರು ಅನುದಾನ ಇಟ್ಟರೂ ವಾರ್ಡ್ ಸದಸ್ಯರಿಗೆ ತಿಳಿಸಬೇಕು, ಆದರೆ ನೀವೇ ಹೋಗಿ ನಮಗೆ ಮಾಹಿತಿ ನೀಡದೆ ಕಾಮಗಾರಿ ಆರಂಭಿಸಿದ್ದೀರಿ. ವಾರ್ಡ್ ಅಭಿವೃದ್ಧಿ ಬಗ್ಗೆ ಸಂತೋಷ ಇದೆ. ಆದರೆ ನಮ್ಮ ಗಮನಕ್ಕೆ ತಾರದೇ ಕಾಮಗಾರಿ ನಡೆಸಲು ಮುಂದಾಗಿ ಗೊಂದಲ ಸೃಷ್ಟಿಸಿದ್ದೀರಿ ಎಂದು ಪಕ್ಷೇತರ ಸದಸ್ಯ ಹರೀಶ್ ರಾವ್, ನಡಾರ್ ಮಡ್ಯಾರ್ ರಾಮಾಶ್ರಯ ರಸ್ತೆ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿದರು.
ಇದುವರೆಗೆ ವಾರ್ಡಿನಲ್ಲಿ ಗುದ್ದಲಿಪೂಜೆ ನಡೆಸುವಾಗ ನನ್ನ ಗಮನಕ್ಕೂ ತಂದಿಲ್ಲ. ಕೆಲಸ ಆರಂಭಿಸಿದ ಮೂರು ದಿನಗಳ ಬಳಿಕ ಕಾಂಗ್ರೆಸ್ ಮುಖಂಡ ಆಲ್ವಿನ್ ಕರೆ ಮಾಡಿದ್ದಾರೆ. ಕ್ರೈಸ್ತರೊಬ್ಬರ ಮನೆ ಬಿಟ್ಟು ಕಾಮಗಾರಿ ಮಾಡುತ್ತಿದ್ದಾರೆಂದು ಸ್ಪೀಕರ್ ಕರೆ ಮಾಡಿದ್ದಾಗಿ ಇಂಜಿನಿಯರ್ ತಿಳಿಸಿದ್ದಾರೆ. ನಮಗೆ ಕರೆ ಮಾಡುವ ಬದಲು ಸ್ಪೀಕರ್ ಇತರರಿಗೆ ಕರೆ ಮಾಡಿ ಕೆಲಸ ನಿಲ್ಲಿಸುವ ಸಾಮರ್ಥ್ಯ ಆ ಮನೆಯವರಿಗೆ ಇದೆ ಎಂದಾದರೆ ಅವರೇ ಕಾಮಗಾರಿ ಮುಂದುವರಿಸಲಿ. ಇಲ್ಲವೇ ಯಾರೂ ಬೇಕಾದರೂ ಮಾಡಿಸಲಿ. ಅಲ್ಲಿ ಕೋಮು ಬಣ್ಣ ತಂದ ಬಳಿಕ ನನಗೆ ಎಷ್ಟು ಬೇಕೋ ಅಷ್ಟೇ ಕಾಮಗಾರಿ ಮಾಡಿಸುತ್ತೇನೆಂದು ಅಧ್ಯಕ್ಷೆ ದಿವ್ಯಾ ತಮ್ಮ ಬಿಗಿ ಪಟ್ಟು ಹಿಡಿದರು.
ನೀವು ಧರ್ಮ ಎಳೆದು ತಂದು ವಿಷಯ ತಿರುಗಿಸಬೇಡಿ. ಅಲ್ಲಿ ಕೋಮು ಬಣ್ಣ ನೀವೇ ತಂದಿದ್ದೀರಿ. ನಿಮ್ಮ ಸ್ವಂತ ಅಥವಾ ಪಕ್ಷದ ಹಣದಿಂದ ರಸ್ತೆ ಮಾಡುತ್ತಿಲ್ಲ. ಜನ ತೆರಿಗೆ ಪಾವತಿಸುತ್ತಾರೆ. ಎಲ್ಲಾ ಕಡೆ ರಾಜಕೀಯ ಮಾಡುತ್ತಾ ಹೋಗಬೇಡಿ ಎಂದು ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ಅವರು ಕರೆ ಮಾಡಿ ಕಾಮಗಾರಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾಗಿ ಮುಖ್ಯಾಧಿಕಾರಿ ಮಾಲಿನಿ ಮಾಹಿತಿ ನೀಡಿದರು. ಅಧ್ಯಕ್ಷರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಹರೀಶ್ ರಾವ್ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಸಭೆಯಲ್ಲಿ ಸದಸ್ಯರು ರಾ.ಹೆ. ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ. ಡಿಪಿಆರ್ ಆಗಿಲ್ಲ ಎದು ಸಹಾಯಕ ಹೆದ್ದಾರಿ ಅಭಿಯಂತರ ವಿಘ್ನೇಶ್ ಉತ್ತರಿಸಿದರು.
ತೊಕ್ಕೊಟ್ಟಿನಿಂದ ತಲಪಾಡಿವರೆಗೆ ಸರ್ವಿಸ್ ರಸ್ತೆ ಅಸಮರ್ಪಕವಾಗಿದೆ. ಬೈಪಾಸ್ ನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಡಿಪಿಆರ್‌ನಲ್ಲಿ ಸರ್ವಿಸ್ ರಸ್ತೆಯೂ ಬರುತ್ತದೆ, ಆದರೆ ಈಗ ಡಿಪಿಆರ್ ಆಗಿಲ್ಲ ಹೇಳುತ್ತಿದ್ದೀರಿ. ರಸ್ತೆ ಸರಿ ಆಗದೆ ಟೋಲ್ ಯಾಕೆ ಸಂಗ್ರಹ ಮಾಡುತ್ತಿದ್ದೀರಿ? ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರಿನ ಹರಿಯವ. ಚರಂಡಿ ಸಮಸ್ಯೆ, ದಾರಿದೀಪ ಸಮಸ್ಯೆ ಇದ್ದು ಈ ಬಗ್ಗೆ ಅಧಿಕಾರಿಗಳಿಗೆ ನೀಡಿದ ಮನವಿಗಳು ಏನಾಗಿದೆ ಎಂದು ಸದಸ್ಯ ಸುಜಿತ್ ಮಾಡೂರು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿಯವರು ಊರಿನ ಹೆಸರು ತಪ್ಪಾಗಿ ಹಾಕುತ್ತಾರೆ, ನಾವೇ ಹೆಸರು ಬರೆದು ಕೊಡುತ್ತೇವೆ, ಸರಿಯಾಗಿ ಹಾಕಿ ಎಂದು ಧೀರಜ್ ಮನವಿ ಮಾಡಿದರು.
ಪಂಚಾಯಿತಿ ಅಧಿಕಾರಿಯೇ ಆಗಿರುವ ಕಂದಾಯ ನಿರೀಕ್ಷಕರು ಒಂದೇ ಒಂದು ಸಭೆಗೂ ಬರುವುದಿಲ್ಲ ಎಂದರೆ ಹೇಗೆ? ಅವರನ್ನು ಕೇಳುವವರು ಯಾರೂ ಇಲ್ಲವೇ ಎಂದು ಸುಜಿತ್ ಪ್ರಶ್ನಿಸಿದರು.
ಅಧಿಕಾರಿ ವಾರಕ್ಕೆರಡು ದಿನ ಪಂಚಾಯಿತಿಯಲ್ಲೇ ಇರುತ್ತಾರಲ್ವಾ? ಸಮಸ್ಯೆ ಇದ್ದರೆ ಅವರಲ್ಲಿ ಹೇಳಬಹುದಲ್ಲವೇ ಎಂದು ಆರ್.ಐ. ಗೈರಿನ ಬಗ್ಗೆ ಧೀರಜ್ ಸಮರ್ಥನೆ ನೀಡಿದರು.
ತಹಶೀಲ್ದಾರ್‌ರಿಂದ ನಮಗೂ ಸಮಸ್ಯೆಯಾಗಿದೆ. ನಿವೇಶನಕ್ಕೆ ಸಂಬAಧಿಸಿ ಸರ್ವೇ ನಂಬ್ರ ಕೂಡಾ ನೀಡಲಾಗಿದೆ ಆದರೂ ಯಾವುದೇ ಕ್ರಮ ಆಗಿಲ್ಲ. ಹೀಗೇ ಮುಂದುವರಿದರೆ ನಾವು ಸಭೆಗೇ ಬರುವುದಿಲ್ಲ ಎಂದು ಸುಜಿತ್ ಅಸಮಾಧಾನ ವ್ಯಕ್ತಪಡಿಸಿದರು. ತಹಶೀಲ್ದಾರ್‌ರಿಂದ ನಮಗೂ ಸಮಸ್ಯೆ ಆಗಿದೆ. ನಾನೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕೊಂಡಾಣ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.