ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಮೃತ್ಯು
Tuesday, June 16, 2026
ಬಂಟ್ವಾಳ: ತಾಲೂಕಿನ ಅಲ್ಲಿಪಾದೆ ನಿವಾಸಿ ಬಂಟ್ವಾಳ ಎಸ್‌ವಿಎಸ್ ದೇವಳ ಅಂಗ್ಲ ಮಾಧ್ಯಮ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿನಿ ವಿಪರೀತವಾದ ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಅಲ್ಲಿಪಾದೆ ಅನೇಜ ಛಾಯ ಎಂಬವರ ಪುತ್ರಿ ಅರ್ನಿಕಾ (5) ಅಸುನೀಗಿದ ದುರ್ದೈವಿ ಬಾಲಕಿ. ಈಕೆ ಶುಕ್ರವಾರ ಶಾಲೆಗೂ ಹಾಜರಾಗಿದ್ದಳು.
ಶನಿವಾರ, ಆದಿತ್ಯವಾರ ಶಾಲೆಗೆ ರಜೆ ಇದ್ದು, ಜ್ವರದ ಹಿನ್ನಲೆಯಲ್ಲಿ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಬಾಲಕಿ ಅರ್ನಿಕಳ ನಿಧನದ ಹಿನ್ನಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಮೃತ ಬಾಲಕಿಯ ಅಂತಿಮ ದರ್ಶನ ಪಡೆದರಲ್ಲದೆ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿದರು.