ಕೆಲಿಂಜ ದ.ಕ.ಜಿ.ಪಂ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ
ಶಾಲಾ ಪ್ರಾರಂಭೋತ್ಸವದ ಹಿನ್ನೆಲೆ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮೊದಲಿಗೆ ವಿಶೇಷ ದಾಖಲಾತಿ ಆಂದೋಲನದ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದರು. ಬಳಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಪೋಷಕರು, ಶಾಲಾ ಮೇಲುಸ್ತುವಾರಿ ಸಮಿತಿಯವರು ಹಾಗೂ ಹಳೆ ವಿದ್ಯಾರ್ಥಿ ಸಂಘದವರು ಶಾಲಾ ಪರಿಸರದಲ್ಲಿ ಮೆರವಣಿಗೆಯನ್ನು ನಡೆಸಿದರು. ವಿದ್ಯಾರ್ಥಿಗಳಿಗೆ, ಬಲೂನುಗಳನ್ನು ನೀಡಿ, ಹೂ ಮಳೆ ಸುರಿಸಿ, ಪನ್ನೀರು ಎರಚಿ, ಸಿಹಿ ತಿಂಡಿ ವಿತರಿಸುವುದರೊಂದಿಗೆ ಸ್ವಾಗತಿಸಲಾಯಿತು.
ಬಳಿಕ ‘ಶಾಲಾ ಪ್ರಾರಂಭೋತ್ಸವ’ ಮತ್ತು ‘ಪೋಷಕರ ಸಭೆ’ಯನ್ನು ನಡೆಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹಿತ್ ಕುಮಾರ್ ಎಂ., ಉಪಾಧ್ಯಕ್ಷೆ ಜಯಂತಿ, ಸದಸ್ಯರುಗಳು ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಸಂತೋಷ್ ಶೆಟ್ಟಿ ಸೀನಾಜೆ, ವೀರಕಂಬ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಸಂದೀಪ್ ಪೂಜಾರಿ, ಶಾಲಾಭಿಮಾನಿಗಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ದೇವಪ್ಪ ಗೌಡ ಈ ವರ್ಷ ದಾಖಲಾದ ಹೊಸ ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್‌ಗಳನ್ನು ವಿತರಿಸಿದರು. ಶಾಲೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡಲಾದ ಪಠ್ಯಪುಸ್ತಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೋಟ್ ಬುಕ್ ವಿತರಿಸಲಾಯಿತು. ಮಧ್ಯಾಹ್ನ ಪೋಷಕರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಸಿಹಿಯೂಟವನ್ನು ನೀಡಲಾಯಿತು.
ಶಾಲಾ ಮುಖ್ಯ ಗುರುಗಳಾದ ವನಿತಾ ಸ್ವಾಗತಿಸಿದರು. ಶಿಕ್ಷಕಿ ನಳಿನಾಕ್ಷಿ ಯಂ. ಅವರು ದ್ವಿಭಾಷ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿದರು. ಶಿಕ್ಷಕಿ ಅಶ್ವಿತಾ ವಂದಿಸಿದರು. ಶಿಕ್ಷಕಿ ಉಷಾ ಸುವರ್ಣ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿಯರಾದ ಅನನ್ಯ ಮತ್ತು ರೂಪಿತಾ ಸಹಕರಿಸಿದರು.