ಪರಿಸರದ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಅಶೋಕ್ ಕುಮಾರ್ ಪಡ್ಪು

ಪರಿಸರದ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಅಶೋಕ್ ಕುಮಾರ್ ಪಡ್ಪು


ಬಂಟ್ವಾಳ: ಪರಿಸರವು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಗಾಳಿ, ನೀರು, ಮಣ್ಣು, ಸಸ್ಯಗಳು ಮತ್ತು ಪ್ರಾಣಿಗಳು ಸೇರಿ ಪರಿಸರವನ್ನು ರೂಪಿಸುತ್ತವೆ. ಪರಿಸರದ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹೇಳಿದರು.


ಗುರುವಾರ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವವಾಹಿನಿ ಮಾಣಿ ಘಟಕ ವತಿಯಿಂದ ಮಜಿ ಶಾಲಾ ಮುಖಮಂಟಪಕ್ಕೆ ಅಳವಡಿಸಿದ ಸೀಟ್ ಮುಚ್ಚಿಗೆ ಸಮರ್ಪಣೆ ಹಾಗೂ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟು ‘ಯುವ ವೃಕ್ಷೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರವು ಜೀವಿಗಳ ಅಸ್ತಿತ್ವಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಶುದ್ಧ ಗಾಳಿ, ಕುಡಿಯುವ ನೀರು ಮತ್ತು ಆಹಾರ ಉತ್ಪಾದನೆಗೆ ಆರೋಗ್ಯಕರ ಪರಿಸರ ಅತ್ಯಗತ್ಯವಾಗಿದೆ. ಪರಿಸರದ ಸಮತೋಲನದಿಂದ ಪ್ರಕೃತಿಯ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿಯನ್ನು ಕಾಪಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಜೀವನವನ್ನು ನೀಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಯುವ ವಾಹಿನಿಯ ಖಜಾಂಚಿ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಮಾತನಾಡಿ, ಪರಿಸರ ದಿನದಂದು ಗಿಡಗಳನ್ನು ನೆಟ್ಟು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿರದೆ ತಿಂಗಳುಗಳ ಕಾಲ ಅದರ ಪೋಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಮಾಸಾಚಾರಣೆಯ ವಿನೂತನ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳು ಪರಿಸರದ ಕಾಳಜಿ, ಸ್ವಚ್ಛತೆಯ ಜಾಗೃತಿ, ಸೇವಾ ಮನೋಭಾವವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಬೇಡಿಕೆಯಂತೆ ಶಾಲಾ ಮುಖ ಮಂಟಪಕ್ಕೆ ಶೀಟ್ ಮುಚ್ಚಿಗೆಯನ್ನು ಒದಗಿಸಿದ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಶೀ ಸಾಯೀ ಅವರನ್ನು ಶಾಲಾ ಪರವಾಗಿ ಅಭಿನಂದಿಸಲಾಯಿತು.

ಯವವಾಹಿನಿ ಮಾಣಿ ಘಟಕದ ಉಪಾಧ್ಯಕ್ಷ ಸುಜಿತ್ ಅಂಚನ್, ಸದಸ್ಯರಾದ ಪ್ರತ್ವೀಕ್, ರೇಣುಕಾ ಕಣಿಯೂರು, ವೀರಕಂಭ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಳಿಮಾರು, ಪ್ರಗತಿಪರ ಕೃಷಿಕರಾದ ಜಯಪ್ರಕಾಶ್ ತೆಕ್ಕಿಪಾಪು, ಶಾಲಾ ವಿದ್ಯಾರ್ಥಿ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು. ಶಿಕ್ಷಕ ತೌಸೀಫ್ ಅಹ್ಮದ್ ವಂದಿಸಿ, ಹಿರಿಯ ಶಿಕ್ಷಕಿ ಸಂಗೀತ ಶರ್ಮಾ ಪಿ.ಜಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article