ಬ್ಯಾಂಕ್ ಮ್ಯಾನೇಜರ್ ಹೊಳೆಯಲ್ಲಿ ಬಿದ್ದು ಮೃತ್ಯು
ಕಾಪು: ಕೆನರಾ ಬ್ಯಾಂಕ್ ಮ್ಯಾನೇಜರ್ ಹೊಳೆಯಲ್ಲಿ ಬಿದ್ದು ಮೃತಪಟ್ಟ ಘಟನೆ ಜೂ.26ರಂದು ರಾತ್ರಿ ವೇಳೆ ಉದ್ಯಾವರದಲ್ಲಿ ನಡೆದಿದೆ.
ಮೃತರನ್ನು ಕೇರಳ ಮೂಲದ ಕೆನರಾ ಬ್ಯಾಂಕ್ ಕಾರ್ಕಳ ಶಾಖೆಯ ಮೇನೇಜರ್ ರಿಯಾಝ್ ಕೆ.ಕೆ. (49) ಎಂದು ಗುರುತಿಸಲಾಗಿದೆ.
ಮಣಿಪಾಲ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಯಾಝ್, ಒಂದು ತಿಂಗಳ ಹಿಂದೆ ಕಾರ್ಕಳ ಕೆನರಾ ಬ್ಯಾಂಕ್‌ಗೆ ವರ್ಗಾವಣೆ ಹೊಂದಿದ್ದರು. ಉಡುಪಿ ನಗರದ ಫ್ಲ್ಯಾಟ್‌ನಲ್ಲಿ ವಾಸವಾಗಿರುವ ಇವರು ಒಂದು ತಿಂಗಳಿನಿಂದ ಪ್ರತಿದಿನ ಮನೆಯಿಂದ ಕಾರ್ಕಳಕ್ಕೆ ಹೋಗಿ ಬರುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈ ಸಂಬಂಧ ಅವರು ಮಣಿಪಾಲ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದರು.
ಅವರು ಜೂ.26 ರಂದು ರಜೆಯ ಕಾರಣ ಮನೆಯಲ್ಲಿದ್ದು ಬೆಳಗ್ಗೆ ದಿನಸಿ ತೆಗೆದುಕೊಂಡು ಬರುವುದಾಗಿ ಹೇಳಿ ಮೊಬೈಲ್‌ನ್ನು ಮನೆಯಲ್ಲಿ ಬಿಟ್ಟು ಸ್ಕೂಟರ್‌ನಲ್ಲಿ ಹೋಗಿದ್ದರು. ನಂತರ ರಿಯಾಝ್ ರಾತ್ರಿಯಾದರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಜೂ.27 ರಂದು ನಸುಕಿನ ವೇಳೆ 1.30ರ ಸುಮಾರಿಗೆ ಸ್ಕೂಟರ್ ಉದ್ಯಾವರ ಸೇತುವೆ ಬಳಿ ಹಾಗೂ ಮೃತದೇಹವು ಉದ್ಯಾವರ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಯಿತು.
ಇವರು ಹೊಳೆಗೆ ಆಕಸ್ಮಾತ್ ಬಿದ್ದು ಅಥವಾ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.