ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪದೋನ್ನತಿಯಾದ ಮೂಡುಮಾರ್ನಾಡು ಪ್ರೌಢಶಾಲೆ ಮುಖ್ಯ ಶಿಕ್ಷಕಿ ರಾಜಶ್ರೀ ಬಿ.ಗೆ ಬೀಳ್ಕೊಡುಗೆ
Sunday, June 28, 2026
ಮೂಡುಬಿದಿರೆ: ಮೂಡುಮಾರ್ನಾಡು ಪಿಎಂ ಶ್ರೀ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಡಾ. ರಾಜಶ್ರೀ ಬಿ. ಅವರು ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅಭಿನಂದನಾ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಕಂಬಳ ಕ್ಷೇತ್ರದ ಧುರೀಣ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ಡಾ. ರಾಜಶ್ರೀ ಬಿ. ಅವರನ್ನು ಸನ್ಮಾನಿಸಿ ಮೂಡುಮಾರ್ನಾಡು ಪ್ರೌಢಶಾಲೆಯ ಶೈಕ್ಷಣಿಕ ಪ್ರಗತಿಗೆ ರಾಜಶ್ರೀ ಬಿ. ನೀಡಿದ ಸೇವೆಯನ್ನು ಸ್ಮರಿಸಿದ ಅವರು, ಹೊಸ ಜವಾಬ್ದಾರಿಯಲ್ಲಿ ಮತ್ತಷ್ಟು ಉನ್ನತ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ಗಣಿತ ಶಿಕ್ಷಕಿ ಸುಮಿತಾ, ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯ ಸತೀಶ ಕರ್ಕೇರ ಮಾತನಾಡಿ, ಡಾ. ರಾಜಶ್ರೀ ಬಿ. ಅವರ ಆಡಳಿತಾತ್ಮಕ ಸಾಮರ್ಥ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದಿರುವ ಪಡುಮಾರ್ನಾಡು ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಅವರನ್ನು ಸನ್ಮಾನಿಸಲಾಯಿತು.
ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಯಶೋಧರ ಆಚಾರ್ಯ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೂಡುಮಾರ್ನಾಡು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶೋಭಾ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಸ್ವಾಗತಿಸಿದರು. ಹಿಂದಿ ಭಾಷಾ ಶಿಕ್ಷಕಿ ಬಾಬಿ ವಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಜೋನ್ ರೊನಾಲ್ಡ್ ಕಾರ್ಯಕ್ರಮ ನಿರೂಪಿಸಿದರು.
