ಮಂಗಳೂರಿನಿಂದ ಕದ್ದ ಅರಣ್ಯ ಇಲಾಖೆಯ ಜೀಪು ಕೋಟೇಶ್ವರದಲ್ಲಿ ವಶ, ಕಳ್ಳನ ಬಂಧನ

ಮಂಗಳೂರಿನಿಂದ ಕದ್ದ ಅರಣ್ಯ ಇಲಾಖೆಯ ಜೀಪು ಕೋಟೇಶ್ವರದಲ್ಲಿ ವಶ, ಕಳ್ಳನ ಬಂಧನ

ಕುಂದಾಪುರ: ಮಂಗಳೂರು ನಗರದ ಪಡೀಲ್ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ನಿಲ್ಲಿಸಲಾಗಿದ್ದ ಅರಣ್ಯ ಇಲಾಖೆಯ ಜೀಪನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೇವಲ ಅರ್ಧ ಗಂಟೆಯೊಳಗೆ ಕೋಟೇಶ್ವರದ ಬಳಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ. 

ಕೇರಳದ ಕೋಯಿಕ್ಕೋಡ್ ಮೂಲದ ನದೀಮ್ (23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನ ಪಡೀಲ್‌ನಲ್ಲಿರುವ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಸಂಚಾರಿ ದಳದ ಆರ್‌ಎಫ್‌ಒ ಸಂತೋಷ್ ರೈ ಅವರ ಇಲಾಖಾ ಜೀಪನ್ನು ನಿಲ್ಲಿಸಲಾಗಿತ್ತು. ಚಾಲಕರು ರಾತ್ರಿ ವೇಳೆ ಕ್ವಾಟ್ರಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸೋಮವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಅಲ್ಲಿಗೆ ಬಂದ ನದೀಮ್, ಜೀಪಿನ ಗಾಜು ಒಡೆದು ಒಳನುಗ್ಗಿದ್ದಾನೆ. ವಾಹನದ ಡ್ರಾವರ್‌ನಲ್ಲಿ ಇರಿಸಲಾಗಿದ್ದ ಹೆಚ್ಚುವರಿ ಕೀಯನ್ನು ಬಳಸಿ ಜೀಪನ್ನು ಚಾಲನೆ ಮಾಡಿದ ಆರೋಪಿ, ಜೀಪಿಗೆ ಅಳವಡಿಸಲಾಗಿದ್ದ ಸೈರನ್ ವ್ಯವಸ್ಥೆಯ ವೈರ್ ಕತ್ತರಿಸಿ ಯಾವುದೇ ಅನುಮಾನ ಮೂಡದಂತೆ ವಾಹನವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.

ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದ ಚಾಲಕ ಜೀಪು ಕಾಣೆಯಾಗಿರುವುದನ್ನು ಗಮನಿಸಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಬಳಿಕ ವಾಹನಕ್ಕೆ ಅಳವಡಿಸಲಾಗಿದ್ದ ಜಿಪಿಎಸ್ ವ್ಯವಸ್ಥೆಯ ಮೂಲಕ ಜೀಪು ಇರುವ ಸ್ಥಳವನ್ನು  ಪತ್ತೆಹಚ್ಚಿದ ಅಧಿಕಾರಿಗಳು, ಜೀಪು ಉಡುಪಿ ಜಿಲ್ಲೆಯ ಕುಂದಾಪುರದತ್ತ ಚಲಿಸಿ ಕೋಟೇಶ್ವರ ಸಮೀಪದ ಮೂಡುಗೋಪಾಡಿಯ ಮನೆಯೊಂದರ ಬಳಿ ನಿಲ್ಲಿಸಿರುವುದನ್ನು ಗುರುತಿಸಿದ್ದಾರೆ. ತಕ್ಷಣ ಕುಂದಾಪುರ ಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದ್ದು, ಜೀಪು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಲಾಯಿತು. 

ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಿರುವ ಮಾಹಿತಿ ತಿಳಿದ ಆರೋಪಿ, ಜೀಪಿನೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದೇ ವೇಳೆ ಜಿಪಿಎಸ್ ಮೂಲಕ ವಾಹನದ ಚಲನವಲನವನ್ನು ನಿರಂತರವಾಗಿ ಗಮನಿಸುತ್ತಿದ್ದ ಆರ್‌ಎಫ್‌ಒ ಸಂತೋಷ್ ರೈ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಜೀಪಿನ ನಿಖರ ಮಾಹಿತಿ ನೀಡಿದ್ದು, ಅರಣ್ಯ ಸಿಬ್ಬಂದಿ ವಾಹನವನ್ನು ಅಡ್ಡಗಟ್ಟಿ ತಡೆದಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆರೋಪಿ ಜೀಪನ್ನು ರಸ್ತೆಯಲ್ಲೇ ಬಿಟ್ಟು ಓಡಲು ಯತ್ನಿಸಿದರೂ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಆರೋಪಿ ನದೀಮ್ ಕೂಳೂರು ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಜೀಪಿಗೆ ಪೂರ್ಣ ಪ್ರಮಾಣದಲ್ಲಿ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ತೆರಳಿರುವುದು ಬೆಳಕಿಗೆ ಬಂದಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ ವಾಹನದ ಸಂಖ್ಯೆಯನ್ನು ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದರು.

ಅರಣ್ಯ ಇಲಾಖೆಯ ಸಂಚಾರಿ ದಳದ ಜೀಪು ಕಳವುಗೊಂಡಿರುವ ಕುರಿತು ಆರ್‌ಎಫ್‌ಒ ಸಂತೋಷ್ ರೈ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಂದಾಪುರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ನದೀಮ್ ವೃತ್ತಿಪರ ವಾಹನ ಕಳ್ಳನಾಗಿರುವ ಶಂಕೆ ವ್ಯಕ್ತವಾಗಿದ್ದು, ಜೀಪಿನ ಗಾಜು ಒಡೆದು ಕೀ ಪಡೆದುಕೊಂಡಿರುವುದು, ಸೈರನ್ ವೈರ್ ಕತ್ತರಿಸಿರುವುದು ಹಾಗೂ ಯಾವುದೇ ಸುಳಿವು ಬಿಟ್ಟುಕೊಡದೆ ಸರ್ಕಾರಿ ವಾಹನವನ್ನೇ ಕಳವು ಮಾಡಲು ಯತ್ನಿಸಿರುವುದು ಆತನ ಕುತಂತ್ರವನ್ನು ಬಯಲಿಗೆಳೆದಿದೆ. ಆರೋಪಿಯ ಹಿನ್ನೆಲೆ ಹಾಗೂ ಸಂಪರ್ಕಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಜೀಪು ಕಳವು ಮಾಡಿದ ಸ್ಥಳದಲ್ಲೇ ತನ್ನ ಚಪ್ಪಲಿಯನ್ನು ಬಿಟ್ಟು ಹೋಗಿರುವ ಆರೋಪಿ, ಅಲ್ಲಿದ್ದ ಅರಣ್ಯ ಸಿಬ್ಬಂದಿಯೊಬ್ಬರ ಹಳೆಯ ಚಪ್ಪಲಿಯನ್ನು ಧರಿಸಿಕೊಂಡು ಪರಾರಿಯಾಗಿದ್ದಾನೆ. 2023ರಲ್ಲಿ ಖರೀದಿಸಲಾಗಿದ್ದ ಬೊಲೆರೋ ಜೀಪು ಬಹುತೇಕ ಹೊಸ ಸ್ಥಿತಿಯಲ್ಲೇ ಇದ್ದು, ಇದೀಗ ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article