ಆ.7, 8ರಂದು ಆಳ್ವಾಸ್ ಉದ್ಯೋಗ ಮೇಳ: ಯುವ ಜನತೆಗೆ ಗುಣಮಟ್ಟದ ಉದ್ಯೋಗಾವಕಾಶ
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡ ಆಳ್ವಾಸ್ ಪ್ರಗತಿ ಉದ್ಯೋಗ ಮೇಳವು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವ ವೇದಿಕೆಯಾಗಿದೆ ಎಂದರು.
ಇದುವರೆಗೆ ಪ್ರತಿಷ್ಟಾನದಿಂದ ನಡೆದಿರುವ ಉದ್ಯೋಗ ಮೇಳಗಳಲ್ಲಿ 250ಕ್ಕೂ ಅಧಿಕ ಪ್ರತಿಷ್ಟಿತ ಕಂಪನಿಗಳು ಭಾಗಹಿಸುತ್ತಿದ್ದು, ಇಲ್ಲಿಯವರೆಗೆ 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್‌ಗೊಂಡು 40848 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಅವಕಾಶ ದೊರಕಿದೆ.
ಪ್ರಸಕ್ತ ಸಾಲಿನ ಉದ್ಯೋಗ ಮೇಳದಲ್ಲಿ 300ಕ್ಕೂ ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಬ್ಯಾಂಕಿಂಗ್ ಹಾಗೂ ಹಣಕಾಸು, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಔಷಧೋದ್ಯಮ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ದೂರಸಂಪರ್ಕ, ಆರೋಗ್ಯ, ಮಾಧ್ಯಮ, ನಿರ್ಮಾಣ, ಇಲೆಕ್ಟ್ರಾನಿಕ್ಸ್, ಶಿಕ್ಷಣ ಹಾಗೂ ಎನ್ಜಿಒ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳು ನೇಮಕಾತಿ ನಡೆಸಲಿವೆ. ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ನಿರ್ವಹಣೆ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಕೌಶಲ್ಯಾಧಾರಿತ ವೃತ್ತಿಗಳು, ಪಿಯುಸಿ, ಎಸೆಸೆಲ್ಸಿ, ಹಾಗೂ ಇತರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.
ಆಗಸ್ಟ್ 6ರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು. ಐಟಿಐ ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು. ಅಭ್ಯರ್ಥಿಗಳು ಆ. 7ರಂದು ಬೆಳಗ್ಗೆ 8 ಗಂಟೆಗೆ ಮೂಡಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಹಾಜರಿರಬೇಕು. ಸುಮಾರು 10 ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ನವೀಕರಿಸಿದ ಬಯೋಡೇಟಾ, ಅಂಕಪಟ್ಟಿಗಳ ದೃಢೀಕರೃತ ಜೆರಾಕ್ಸ್ ಪ್ರತಿಗಳು, ಆನ್‌ಲೈನ್ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 9741440490ಗೆ ಸಂಪರ್ಕಿಸಬಹುದು. ಕಂಪನಿಗಳು ನೋಂದಣಿಗಾಗಿ 9731953123 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ನೋಂದಣಿ..
ಭಾಗವಹಿಸುವ ಕಂಪನಿಗಳ ವಿವರಗಳನ್ನು www.alvaspragati.com ವೆಬ್‌ಸೈಟ್‌ನ್ನು ನಿರಂತರವಾಗಿ ನವೀಕರಿಸಲಾಗುವುದು. ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಉದ್ಯೋಗಾಕಾಂಕ್ಷಿಗಳಿಗೆ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ. ವೆಬ್‌ಸೈಟ್ ಕ್ಯಾಂಡಿಡೇಟ್ ರಿಜಿಸ್ಟ್ರೇಶನ್‌ನಲ್ಲಿ ಉಚಿತವಾಗಿ ನೋಂದಣಿ ಮಾಡಬಹುದು. ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳ ವಿವರ, ಅರ್ಹತೆ ಹಾಗೂ ವೃತ್ತಿ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡುವ ಸಲುವಾಗಿ ಆಳ್ವಾಸ್ ತಜ್ಞರ ತಂಡ ಅವಿಭಜಿತ ದ.ಕ. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿಶೇಷ ಓರಿಯಂಟೇಶನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ನೇಮಕಾತಿ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.