ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆ: ಜೂನ್ 8ರಿಂದ ಮುಂಗಾರು ಅಬ್ಬರದ ಮುನ್ಸೂಚನೆ
ಮಂಗಳೂರು: ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಬುಧವಾರ ಬೆಳಗ್ಗೆಯಿಂದಲೇ ಬಿಟ್ಟು ಬಿಟ್ಟು ಮಳೆಯಾಗಿದೆ.
ಬುಧವಾರ ಮುಂಜಾನೆಯ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ ಹಾಗೂ ಮಂಗಳೂರು ನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಆ ಬಳಿಕ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಮಧ್ಯಾಹದ ನಂತರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಸಂಪೂರ್ಣವಾಗಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಕರಾವಳಿ ಹಾಗೂ ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಹಠಾತ್ ಮಳೆಯಾದ ಹಿನ್ನೆಲೆಯಲ್ಲಿ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದ್ದು, ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸರಬರಾಜನ್ನು ಹಲವಡೆ ಮಿತಗೊಳಿಸಿದೆ.
ಜೂನ್ 4ರಿಂದ ಕಡಲತೀರದಲ್ಲಿ ಉತ್ತಮ ಮಳೆ:
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಈ ಮಳೆಯ ವಾತಾವರಣವು ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಜೂನ್ 4ರಿಂದ ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಡಲ ತೀರದ (ಕರಾವಳಿ) ಭಾಗಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಳಿದ ಒಳನಾಡು ಹಾಗೂ ಘಟ್ಟ ಪ್ರದೇಶದ ಭಾಗಗಳಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಜೂನ್ 8ರಿಂದ ಮುಂಗಾರು ಪ್ರವೇಶದ ಲಕ್ಷಣ:
ಪ್ರಸ್ತುತ ಲಭ್ಯವಿರುವ ಹವಾಮಾನ ಮಾದರಿಗಳ ಪ್ರಕಾರ, ಜೂನ್ 8ರಿಂದ ರಾಜ್ಯಾದ್ಯಂತ ಮುಂಗಾರು ಮಳೆಯ ಅಬ್ಬರ ಅಧಿಕೃತವಾಗಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತಗಳ ಪ್ರವೇಶಕ್ಕೆ ಪೂರಕವಾದ ಸೈಕ್ಲೋನಿಕ್ ವಾತಾವರಣ ನಿರ್ಮಾಣವಾಗುತ್ತಿದ್ದು, ಇದರೊಂದಿಗೆ ‘ಸೋಮಾಲಿಯಾ ಜಟ್ ಸ್ಟ್ರೀಮ್’ (ಖಟಞಚ್ಝಜಿ ಒಛಿಠಿ ಖಠ್ಟಿಛಿಞ) ಪ್ರಭಾವವೂ ಇರಲಿದೆ. ಈ ಜಾಗತಿಕ ಹವಾಮಾನ ಬದಲಾವಣೆಯ ನೇರ ಪರಿಣಾಮವಾಗಿ ಕರಾವಳಿ ತೀರ ಪ್ರದೇಶಗಳಲ್ಲಿ ಜೂನ್ 12ರ ತನಕ ಭಾರಿ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಇದೆ. ಸದ್ಯದ ಸ್ಥಿತಿಗತಿಯನ್ನು ಗಮನಿಸಿದರೆ ಜೂನ್ 13 ಅಥವಾ 14ರಿಂದ ಮಳೆಯ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸೂಚನೆಗಳಿದ್ದರೂ, ವಾತಾವರಣದ ಕ್ಷಣಕ್ಷಣದ ಬದಲಾವಣೆಯನ್ನು ಹವಾಮಾನ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕರಾವಳಿ ಭಾಗದ ಸಾರ್ವಜನಿಕರು ಹಾಗೂ ಮೀನುಗಾರರು ಜಾಗರೂಕರಾಗಿರಲು ಕೋರಲಾಗಿದೆ.