ಸಾರ್ವಜನಿಕ ಜಾಗದಲ್ಲಿ ಕಸ ಎಸೆದರೆ ‘ಎಫ್‌ಐಆರ್’ ದಂಡ ಖಚಿತ: 5 ಪ್ರಕರಣಗಳಲ್ಲಿ 30 ಸಾವಿರ ದಂಡ ವಸೂಲಿ
ಕಳೆದ ಹಲವು ಸಮಯದಿಂದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛ ಶನಿವಾರ, ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೂ ಕೆಲವರು ಸಾರ್ವಜನಿಕ ಪ್ರದೇಶದಲ್ಲಿ ಕಸ-ತ್ಯಾಜ್ಯ ಎಸೆಯುವ ಛಾಳಿಯನ್ನು ಮುಂದುವರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಠಿಣ ಕಾನೂನುಕ್ರಮ ವಹಿಸುವುದು ಅನಿವಾರ್ಯವಾದ ಹಿನ್ನಲೆಯಲ್ಲಿ ಇದೀಗ ಕಸ ಎಸೆದವರನ್ನು ಪತ್ತೆ ಹಚ್ಚಿ ಅವರಿಗೆ ರೂ.5 ಸಾವಿರ ದಂಡ ವಿಧಿಸುವ ಮೂಲಕ ನಾಗರಿಕಪ್ರಜ್ಞೆಯನ್ನು ಎಚ್ಚರಿಸುವ ಕೆಲಸಕ್ಕೆ ತಾಲೂಕು ಆಡಳಿತ ಮತ್ತು ಗ್ರಾಮಾಡಳಿತಗಳು ಮುಂದಾಗಿವೆ.
ಕಬಕ 4 ಪ್ರಕರಣ 20 ಸಾವಿರ ದಂಡ:
ರಸ್ತೆ ಬದಿಯಲ್ಲಿ ಕಸ ಎಸೆಯುವ 5 ಪ್ರಕರಣದಲ್ಲಿ ಕಸದ ಮೂಟೆಯಲ್ಲಿ ಹುಡುಕಾಡಿ ಅದರಲ್ಲಿ ಪಾರ್ಸೆಲ್ ಗಳು ಬಂದ ಲಕೋಟೆಗಳನ್ನು ಗುರುತಿಸಿ ಅವರ ವಿಳಾಸ ಪತ್ತೆ ಹಚ್ಚಿದ ಪಿಡಿಒ, ಸಿಬಂದಿಗಳು, ಸಂಜೀವಿನಿ ಮತ್ತು ಆಶಾ ಕಾರ್ಯಕರ್ತೆಯರ ಶ್ರಮದಿಂದ ಕಸ ಎಸೆಯುವ ಮಂದಿಗಳನ್ನು ಗುರುತಿಸಲಾಗಿದೆ. ಈ 5 ಮಂದಿಯಲ್ಲಿ 4 ಮಂದಿಗೆ ದಂಡ ವಿಧಿಸಿ ರೂ.20 ಸಾವಿರವನ್ನು ಪಿಡಿಒ ಸುಭಾಶ್ಚಂದ್ರ ಅವರು ವಸೂಲಿ ಮಾಡಿದ್ದಾರೆ. ಓರ್ವ ವ್ಯಕ್ತಿ ದಂಡ ಪಾವತಿಸಲು ನಿರಾಕರಿಸಿದ್ದು, ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಂಸ ಎಸೆದಾತನಿಗೆ 10 ಸಾವಿರ ದಂಡ:
ನರಿಮೊಗರು ಗ್ರಾಪಂ ವ್ಯಾಪ್ತಿಯ ಕೈಪಂಗಳ ಎಂಬಲ್ಲಿ ತೋಡಿಗೆ ಗೋಣಿಚೀಲವೊಂದರಲ್ಲಿ ವ್ಯಕ್ತಿಯೊಬ್ಬ ಮಾಂಸದ ತ್ಯಾಜ್ಯ ಎಸೆದಿದ್ದು, ಇದನ್ನು ವೀಕ್ಷಿಸಿದ ಸಾರ್ವಜನಿಕರು ಈತನ ಫೊಟೊ ತೆಗೆದು ಗ್ರಾಪಂಗೆ ಮಾಹಿತಿ ನೀಡಿದ್ದರು. ಈತನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ ಅಭಿವೃದ್ಧಿ ಅಧಿಕಾರಿ ಆಶಾ ಅವರು ಆತನಿಂದ 10 ಸಾವಿರ ದಂಡ ವಸೂಲಿ ಮಾಡಿದ್ದಾರೆ.
ಕಸ ಎಸೆದರೆ ಎಫ್‌ಐಆರ್:
ಸಾರ್ವಜನಿಕ ಪ್ರದೇಶದಲ್ಲಿ ಕಸ ಮತ್ತು ತ್ಯಾಜ್ಯ ಎಸೆಯುವ ಮೂಲಕ ಪರಿಸರವನ್ನು ಹಾಳು ಮಾಡುವ ವಿಕೃತಿ ಇನ್ನು ನಡೆದರೆ ಅಂತಹ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಜತೆಗೆ ದಂಡ ವಿಧಿಸಲಾಗುವುದು. ಕೇವಲ ಮಾತುಗಳಲ್ಲಿ ಹೇಳಿದರೆ ಕೆಲವರು ಕೇಳುತ್ತಿಲ್ಲ. ಅದಕ್ಕಾಗಿ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ. ಸ್ವಚ್ಛ ಮತ್ತು ಸುಂದರ ವಾತಾವರಣ ನಿರ್ಮಾಣ ಮಾಡಲು ಜನತೆ ಸಹಕಾರ ನೀಡಬೇಕು ಎನ್ನುತ್ತಾರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು.