ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಪ್ರಸ್ತಾಪ ಕೈಬಿಡಲು ಆಗ್ರಹಿಸಿ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಒತ್ತಾಯಿಸಿ ಸುರತ್ಕಲ್ ನಲ್ಲಿ ಬೃಹತ್ ಮಾನವ ಸರಪಳಿ
Tuesday, June 16, 2026
ಸುರತ್ಕಲ್ ಆರೋಗ್ಯ ಕೇಂದ್ರ ಮೇಲ್ದರ್ಜೆ ಪ್ರಸ್ತಾಪ ಸರಕಾರ ತಿರಸ್ಕರಿಸಿರುವುದಕ್ಕೆ ಶಾಸಕ ಭರತ್ ಶೆಟ್ಟರೆ ನೇರ ಹೊಣೆ: ಮುನೀರ್ ಕಾಟಿಪಳ್ಳ ಆರೋಪ
ಮಂಗಳೂರು: ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಆದೇಶವನ್ನು ವಿರೋಧಿಸಿ, ಸುರತ್ಕಲ್ ಹೋಬಳಿಯಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ "ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ" ನೇತೃತ್ವದಲ್ಲಿ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಸುರತ್ಕಲ್ ವ್ಯಾಪ್ತಿಯ ಹಲವು ಸಂಘ ಸಂಸ್ಥೆಗಳು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೈ ಜೋಡಿಸಿದವು.
ಮಾನವ ಸರಪಳಿಗೂ ಮುನ್ನ ನಡೆದ ಸಭೆಯನ್ನುದ್ದೇಶಿಸಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಸರಕಾರಿ ಆಸ್ಪತ್ರೆ ಗಳ ಬಲವರ್ಧನೆಗಾಗಿ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರಗಳಿಗೆ ಖಾಸಗಿ ಆರೋಗ್ಯ ಲಾಬಿಗಳ ಹಿತಾಸಕ್ತಿಗಳೆ ಮುಖ್ಯವಾಗುತ್ತಿದೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆಸ್ಪತ್ರೆಗಳು ವೈದ್ಯರುಗಳಿಲ್ಲದೆ ಬಿಕೋ ಅನ್ನುತ್ತಿದೆ. ಅದೇ ನೆಪಗಳನ್ನು ಮುಂದಿಟ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆರೋಗ್ಯ ಸಚಿವ ಯು ಟಿ ಖಾದರ್ ಸ್ವತಹ ಖಾಸಗೀ ಲಾಬಿಗಳ ಪರವಹಿಸಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.
ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಸರಕಾರದ ಪಟ್ಟಿಯಲ್ಲಿತ್ತು. ಸುರತ್ಕಲ್ ನಾಗರಿಕರು ಮೇಲ್ದರ್ಜೆಗೆ ಏರಿಸುವ ಆದೇಶದ ನಿರೀಕ್ಷೆಯಲ್ಲಿದ್ದರೆ, ಸರಕಾರ ಆ ಪ್ರಸ್ತಾಪವನ್ನೆ ತಿರಸ್ಕರಿಸಿದೆ. ಆ ಮೂಲಕ ಕೈಗಾರಿಕಾ ಪಟ್ಟಣ ಸುರತ್ಕಲ್ ಗೆ ದೊಡ್ಡ ಹಿನ್ನಡೆಯಾಗಿದೆ. ಈ ವೈಫಲ್ಯಕ್ಕೆ ಶಾಸಕ ಭರತ್ ಶೆಟ್ಟರೇ ನೇರ ಹೊಣೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು. ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಆಗಸ್ಟ್ ಕೊನೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಕೃಷ್ಣಾನಂದ ಡಿ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ವೈ ರಾಘವೇಂದ್ರ ರಾವ್, ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯ ಸಿರಾಜ್ ಬಜ್ಪೆ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕೆ, ಅಸುಂತಾ ಡಿ ಸೋಜ, ಸಿಲ್ವಿಯಾ ಜೋಕಟ್ಟೆ, ಕಾಟಿಪಳ್ಳ ಸಾಮಾಜಿಕ ಸಂಘಟನೆಗಳ ವೇದಿಕೆಯ ಮುಂದಾಳುಗಳಾದ ಸಮದ್ ಕಾಟಿಪಳ್ಳ, ಸಲೀ ಶ್ಯಾಡೊ, ನಿಯಾಜ್ ಬದ್ರಿಯಾ, ಫಾರೂಕ್ ಪುತ್ತ, ಅಲ್ತಾಫ್ ಕಾಟಿಪಳ್ಳ, ರಫಿ, ಹಂಝ ಕಾಟಿಪಳ್ಳ, ಹೋರಾಟ ಸಮಿತಿಯ ಪ್ರಮುಖರಾದ ಅಜ್ಮಲ್ ಕಾನ, ಬಿ.ಕೆ. ಮಕ್ಸೂದ್, ಜಗದೀಶ ಕಾನ, ಹರೀಶ್ ಪೇಜಾವರ, ನವಾಜ್ ಕುಳಾಯಿ, ಇಂತಿಯಾಜ್ ಕುಳಾಯಿ, ರವಿಚಂದ್ರ ಕೊಂಚಾಡಿ, ಚಂದ್ರಕಾಂತ ದೇವಾಡಿಗ, ಹಸೈನಾರ್ ಜೋಕಟ್ಟೆ, ಪುಷ್ಪಾ ಜೋಕಟ್ಟೆ, ರಿಕ್ಷಾ ಚಾಲಕರ ಸಂಘದ ಲಕ್ಷ್ಮೀಶ ಕುಳಾಯಿ, ಕಬೀರ್ ಕೃಷ್ಟಾಪುರ, ಶಾಕಿರ್ ಮತ್ತಿತರರು ನೇತೃತ್ವ ವಹಿಸಿದ್ದರು.
ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಸುರತ್ಕಲ್ ಘಟಕದ ಸಂಚಾಲಕರಾದ ಶ್ರೀನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.




