ವಂದೇ ಭಾರತ್ ಪ್ರಾಯೋಗಿಕ ಸಂಚಾರ ರದ್ದು
Monday, June 1, 2026
ಮಂಗಳೂರು: ಜೂನ್ 3ರಂದು ನಿಗದಿಯಾಗಿದ್ದ ಬಹು ನಿರೀಕ್ಷಿತ ಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ರದ್ದುಗೊಳಿಸಿದೆ.
ಈ ಕುರಿತು ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಪ್ರಯಾಣಿಕ ಸಂಚಾರ ವ್ಯವಸ್ಥಾಪಕರ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಸಂಬಂಧಪಟ್ಟ ಎಲ್ಲ ವಿಭಾಗಗಳಿಗೆ ಮಾಹಿತಿ ರವಾನಿಸಲಾಗಿದೆ. ಇದರಿಂದಾಗಿ ಟ್ರಯಲ್ ರನ್‌ಗೆ ಸಂಬಂಧಿಸಿದಂತೆ ನಿಗದಿಪಡಿಸಲಾಗಿದ್ದ ಎಲ್ಲ ಕಾರ್ಯಾಚರಣೆಗಳು ಮತ್ತು ಮರು ನಿಗದಿತ ನಿಲ್ದಾಣ ವ್ಯವಸ್ಥೆಗಳನ್ನು ಕೂಡ ರದ್ದುಗೊಳಿಸಲಾಗಿದೆ.
ದಕ್ಷಿಣ ಪಶ್ಚಿಮ ರೈಲ್ವೆಯ ಸಂದೇಶ ಸಂಖ್ಯೆ T.454/YPR-MAQ ವಂದೇ ಭಾರತ್/2026-27(241) ದಿನಾಂಕ 31.05.2026ರ ಪ್ರಕಾರ, ಜೂನ್ 3ರಂದು ಯಶವಂತಪುರ - ಮಂಗಳೂರು - ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಟ್ರಯಲ್ ರನ್ ನಡೆಸುವ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಪ್ರಾಯೋಗಿಕ ಸಂಚಾರ ರದ್ದಿಗೆ ಕಾರಣ ತಿಳಿಸಿಲ್ಲ.