ಸ್ವಾಮಿ ವಿವೇಕಾನಂದರ ಪಯಣವು ಆತ್ಮಶಕ್ತಿ, ಸೇವೆ ಮತ್ತು ವಿಶ್ವಮಾನವೀಯತೆಯ ಸಂದೇಶ: ಸ್ವಾಮಿ ರಾಘವೇಂದ್ರಾನಂದಜಿ
Saturday, June 13, 2026
ಮಂಗಳೂರು: ಸ್ವಾಮಿ ವಿವೇಕಾನಂದರು ತಮ್ಮ ಅದ್ಭುತ ಆತ್ಮವಿಶ್ವಾಸ, ವಿಶಾಲ ದೃಷ್ಟಿಕೋನ ಹಾಗೂ ಅಚಲ ಸಂಕಲ್ಪದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ವೇದಾಂತದ ಮಹತ್ವವನ್ನು ವಿಶ್ವದಾದ್ಯಂತ ಪರಿಚಯಿಸಿದರು ಎಂದು ನಾಗ್ಪುರ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ರಾಘವೇಂದ್ರಾನಂದಜಿ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತಾರನೇ ಉಪನ್ಯಾಸದಲ್ಲಿ ‘ಪರಿವ್ರಾಜಕನಿಂದ ವಿಶ್ವಗುರು: ಸ್ವಾಮೀಜಿಯ ಪಯಣ’ ಎಂಬ ವಿಷಯದ ಕುರಿತು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
1893ರ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ನೀಡಿದ ಐತಿಹಾಸಿಕ ಸಂದೇಶವು ಭಾರತಕ್ಕೆ ಜಾಗತಿಕ ಗೌರವವನ್ನು ತಂದುಕೊಟ್ಟಿತು. ಯುವಜನತೆಯಲ್ಲಿ ಆತ್ಮಶಕ್ತಿ, ಸೇವಾಮನೋಭಾವ, ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದ ಚಿಂತನೆಗಳನ್ನು ಬೆಳೆಸುವ ಅವರ ಆದರ್ಶಗಳು ಇಂದಿಗೂ ಸ್ಫೂರ್ತಿಯ ಚಿಲುಮೆಯಾಗಿವೆ ಎಂದರು.
‘ಪರಿವ್ರಾಜಕನಿಂದ ವಿಶ್ವಗುರು: ಸ್ವಾಮೀಜಿಯ ಪಯಣ’ ಎಂಬ ವಿಷಯವು ಸ್ವಾಮಿ ವಿವೇಕಾನಂದರ ಅಸಾಮಾನ್ಯ ಜೀವನಯಾತ್ರೆಯನ್ನು ಮತ್ತು ವಿಶ್ವಮಾನವತೆಯ ಪರವಾಗಿ ಅವರು ನೀಡಿದ ಅಮೂಲ್ಯ ಸಂದೇಶವನ್ನು ಅನಾವರಣಗೊಳಿಸುತ್ತದೆ. ಯುವ ಪರಿವ್ರಾಜಕರಾಗಿ ಭಾರತದೆಲ್ಲೆಡೆ ಸಂಚರಿಸಿದ ಸ್ವಾಮಿ ವಿವೇಕಾನಂದರು ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಾಸ್ತವತೆಗಳನ್ನು ನೇರವಾಗಿ ಅನುಭವಿಸಿದರು. ಈ ಅನುಭವಗಳೇ ಅವರನ್ನು ಮಾನವಸೇವೆ, ರಾಷ್ಟ್ರಜಾಗೃತಿ ಹಾಗೂ ವಿಶ್ವಭ್ರಾತೃತ್ವದ ಸಂದೇಶವನ್ನು ಸಾರಿದ ಮಹಾನ್ ಯುಗಪುರುಷರನ್ನಾಗಿ ರೂಪಿಸಿದವು.
ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಪ್ರಭಾರ ಪ್ರಾಂಶುಪಾಲ ಡಾ. ಪಿ. ಮಹಾಬಲೇಶ್ವರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಕಿಶೋರ್ ಶೆಟ್ಟಿ, ಉಪಪ್ರಾಂಶುಪಾಲ ಡಾ. ಆಂಟೋನಿ ಪಿ.ಜೆ. ಮತ್ತು ಉಪನ್ಯಾಸಕರು ಹಾಗೂ ಎಂ.ಬಿ.ಎ. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಅವರು ಸ್ವಾಗತಿಸಿ, ಎಂ.ಬಿ.ಎ. ವಿಭಾಗದ ಮುಖ್ಯಸ್ಥೆ ಡಾ. ಪ್ರಮೀಳಾ ಎಸ್. ಶೆಟ್ಟಿ ವಂದಿಸಿದರು. ಎಂ.ಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಹಿ ಎಂ. ರೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.



