‘ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಪೊಲೀಸ್ ಬಳಸಿ ಹತ್ತಿಕ್ಕಿರುವುದು ಖಂಡನೀಯ’

‘ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಪೊಲೀಸ್ ಬಳಸಿ ಹತ್ತಿಕ್ಕಿರುವುದು ಖಂಡನೀಯ’

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ವಿವಿ ಆಡಳಿತ ಸೌಧ ಮುಂಭಾಗದಲ್ಲಿ ಜೂ.12ರಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಕುಲಪತಿ ಅವರು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿರುವುದು ಖಂಡನೀಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೇಳಿದೆ.

ವಿವಿಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವಿ ಕುಲಪತಿ ವಿವಿಧ ಕಾರಣಗಳನ್ನು ಹೇಳುತ್ತಿದ್ದಾರೆಯೇ ವಿನಃ ಪರಿಹಾರ ರೂಪಿಸುತ್ತಿಲ್ಲ. ಇದರ ವಿರುದ್ಧ ಪೊಲೀಸ್ ಇಲಾಖೆಯ ಅನುಮತಿ ಪಡೆದು ಶಾಂತಿಯುತ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಅಲಿಸಿ ಪರಿಹರಿಸುವ ಬದಲು, ವಿಶ್ವವಿದ್ಯಾಲಯದ ಕುಲಪತಿ ಅವರು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಬಂಽಸಿರುವುದು ಅತ್ಯಂತ ಖಂಡನೀಯ ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುವಿತ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯವು ಒಂದು ಕಾಲದಲ್ಲಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯಿಂದ ವಿಶ್ವವಿದ್ಯಾಲಯವು ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳ ಕೊರತೆ, ಅನಗತ್ಯ ಶುಲ್ಕದ ಹೊರೆ, ಶಾಶ್ವತ ಬೋಧಕರ ಕೊರತೆ, ಉದ್ಯೋಗಾವಕಾಶಗಳ ಅಭಾವ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು ಎಂದರು.

ವಿದ್ಯಾರ್ಥಿಗಳು ಶಾಂತಿಯುತವಾಗಿ ತಮ್ಮ ಸಮಸ್ಯೆಗಳನ್ನು ಮಂಡಿಸುವುದು ಪ್ರಜಾಪ್ರಭುತ್ವದ ಹಕ್ಕಾಗಿದೆ. ಆ ಹಕ್ಕನ್ನು ಪೊಲೀಸ್ ಬಲದ ಮೂಲಕ ದಮನಿಸುವುದು ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ತೊರೆಯುವಂತೆ ಸೂಚಿಸುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ವಿದ್ಯಾರ್ಥಿಗಳೊಂದಿಗೆ ಗೌರವಯುತ ಸಂವಾದ ನಡೆಸಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಮಂಗಳೂರು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿನ್ ಮಾತನಾಡಿ, ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳು ಮತ್ತು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟಾಗ, ‘ನಮ್ಮಿಂದ ಇಷ್ಟೇ ಸೌಲಭ್ಯಗಳನ್ನು ನೀಡಲು ಸಾಧ್ಯ. ಅದರಿಂದ ತೃಪ್ತಿಯಿಲ್ಲದಿದ್ದರೆ ಬೇರೆ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳನ್ನು ನೋಡಿಕೊಳ್ಳಿ’ ಎಂಬ ಧೋರಣೆಯ ಮಾತುಗಳನ್ನು ಕುಲಪತಿ ಅವರು ಆಡಿರುವುದು ವಿದ್ಯಾರ್ಥಿಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಇದು ವಿಶ್ವವಿದ್ಯಾಲಯದ ಮುಖ್ಯಸ್ಥರ ಸ್ಥಾನಕ್ಕೆ ಶೋಭೆ ತರದ ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆಯಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಹೊಂದಿರುವ ಕುಲಪತಿ ಅವರು ಇಂತಹ ನಿರ್ಲಕ್ಷ್ಯದ ಧೋರಣೆ ಪ್ರದರ್ಶಿಸಿರುವುದು ಖಂಡನೀಯ. ವಿವಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ಕುಲಪತಿ ಅವರು ರಾಜೀನಾಮೆ ನೀಡಲಿ ಎಂದರು.

ಕಾರ್ಯದರ್ಶಿ ನಿಹಾರ್, ಎಬಿವಿಪಿ ಕೊಣಾಜೆ ನಗರ ಕಾರ್ಯದರ್ಶಿ ಮನು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article