ರಾಜ್ಯದ ಗೃಹ ಮಂತ್ರಿಗೆ ಮುಖ್ಯಮಂತ್ರಿಗಳು ಬುದ್ದಿ ಹೇಳಲಿ: ಸತೀಶ್ ಕುಂಪಲ
ಮಂಗಳೂರು: ಆರ್‌ಎಸ್‌ಎಸ್ ಸಂಘಟನೆಯ ಕಾರ್ಯದ ಬಗ್ಗೆ ತಡವಾಗಿಯಾದರೂ ನೆಹರೂ ಅವರ ಅರಿವಿಗೆ ಬಂದಿತ್ತು ಆದರೆ ರಾಜ್ಯದ ಗೃಹ ಮಂತ್ರಿ ಪದವಿ ಸಿಕ್ಕಿರುವ ಅಮಲಿನಲ್ಲಿ ಪ್ರಿಯಾಂಕ ಖರ್ಗೆ ಸಂಘದ ಬಗ್ಗೆ ಮಾತನಾಡುವುದು ಮುಸ್ಲಿಂ ತುಷ್ಠೀಕರಣವಲ್ಲದೆ ಮತ್ತೇನಲ್ಲ, ಇಂತಹ ಸಚಿವರಿಗೆ ಮುಖ್ಯಮಂತ್ರಿಗಳು ತಿಳಿಹೇಳ ಬೇಕಿದೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭದ ದಿನದಿಂದಲೂ ಹಿಂದೂ ವಿರೋಧಿ ನೀತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ರಾಷ್ಟ್ರಭಕ್ತ ಸಂಘಟನೆಯನ್ನು ದೂರುವುದನ್ನೇ ಕಾಂಗ್ರೆಸ್‌ನ ಕೆಲವು ನಾಯಕರು ರೂಡಿ ಮಾಡಿದ್ದಾರೆ.
ಸರ್ಕಾರದ ಮುಖ್ಯಸ್ಥ ಬದಲಾದರೂ ಜಾಯಮಾನ ಬದಲಾಗಿಲ್ಲ. ಆರ್.ಎಸ್.ಎಸ್. ಬಗ್ಗೆ ಗಂಧಗಾಳಿಯೂ ಗೊತ್ತಿಲ್ಲದ ರಾಜಕಾರಣಿ ಪ್ರಿಯಾಂಕ ಖರ್ಗೆ ಸಂಘದ ನೋಂದಣಿ ಬಗ್ಗೆ ಮಾತನಾಡುತ್ತಿದ್ದಾರೆ. ಸಂಘವು ರಾಷ್ಟ್ರೀಯ ಸಂಘಟನೆ ಮತ್ತು ಜಗತ್ತಿನ ವಿವಿಧ ದೇಶಗಳಲ್ಲಿಯೂ ಸಂಘದ ಶಾಖೆಗಳಿವೆ. ವಿಶ್ವದ ಯಾವುದೇ ರಾಷ್ಟ್ರ ನೊಂದಾವಣೆ ಕೇಳಿಲ್ಲ. ಕರ್ನಾಟಕದ ಗೃಹಮಂತ್ರಿ ಇದನ್ನು ತಿಳಿದುಕೊಳ್ಳಬೇಕು. 40ಕ್ಕಿಂತಲೂ ಹೆಚ್ಚಿನ ರಾಷ್ಟ್ರೀಯ ಮಟ್ಟದ ಉಪ ಸಂಘಟನೆಗಳು ಸಂಘದ ಅಡಿಯಲ್ಲಿ ವಿವಿಧ ಕಾರ್ಯಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ.
ನೂರು ವರ್ಷ ಇತಿಹಾಸ ಇರುವ ಸಂಘವು ಕೇವಲ ಹಿಂದು ಧರ್ಮದ ರಕ್ಷಣೆಯ ಕೆಲಸ ಮಾತ್ರ ಮಾಡಿಲ್ಲ, ಭಾರತ, ಚೀನಾ ಯುದ್ಧದ ಸಂಧರ್ಭದಲ್ಲಿ ಸ್ವಯಂ ಸೇವಕರಾಗಿ ದುಡಿದಿದ್ದಾರೆ, ದೇಶದ ವಿವಿಧ ಕಡೆ ಪ್ರಾಕೃತಿಕ ವಿಕೋಪ ಆದ ಸಮಯದಲ್ಲಿ ಧರ್ಮಾತೀತವಾಗಿ ಸೇವೆ ಸಲ್ಲಿಸಿದೆ. ಅಸ್ಪರ್ಶ್ಯತೆ ವಿರುದ್ಧ, ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ವನವಾಸಿ ಸಮುದಾಯದ ಉದ್ಧಾರಕ್ಕಾಗಿ ಕಾರ್ಯ ಮಾಡಿದೆ ಇಂತಹ ಸಂಘದ ನೋಂದಣಿ ಬಗ್ಗೆ ಚಕಾರ ತೆಗೆಯುವ ಪ್ರಿಯಾಂಕ ಖರ್ಗೆಯ ಮಾನಸಿಕತೆ ಸರಿಯಿಲ್ಲ ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.