ಬಜಾಲ್-ಜಲ್ಲಿಗುಡ್ಡೆಯಿಂದ ಮಂಗಳಾದೇವಿ ನಡುವೆ ಸಂಚರಿಸುತ್ತಿದ್ದ ಬಸ್ಸು ಸೌಲಭ್ಯ ಕೂಡಲೇ ಪುನರ್ ಪ್ರಾರಂಭಿಸುವಂತೆ ಒತ್ತಾಯ
ಮಂಗಳೂರು ನಗರದ ಬಜಾಲ್ ಜಲ್ಲಿಗುಡ್ಡೆಯಿಂದ ಮಂಗಳಾದೇವಿ ನಡುವೆ ಸಂಚರಿಸುತ್ತಿದ್ದ 11ಸಿ ರೂಟ್ ನಂಬರಿನ (ಸಂತ ಅಂತೋನಿ) 3 ಬಸ್ಸು ಕಳೆದ ಹಲವು ತಿಂಗಳುಗಳಿಂದ ನಗರ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಬಸ್ಸುಗಳು ತನ್ನ ಓಡಾಟ ಸೇವೆಯನ್ನು ನಿಲ್ಲಿಸಿರುವ ನಂತರ ಈ ಭಾಗದ ಜನಸಾಮಾನ್ಯರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಪರಿತಪಿಸುವಂತಾಗಿದೆ. ಈ ಭಾಗದ ಜನ ನಗರ ಪ್ರದೇಶಗಳಿಗೆ ತೆರಳಲು ಸರಿಯಾದ ಸಾರಿಗೆ ಸೌಲಭ್ಯ ಇಲ್ಲದೆ ಆಟೋ ಟ್ಯಾಕ್ಸಿಗಳನ್ನು ಬಳಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿರೋದರಿಂದ ಬಹುತೇಕರು ತಮ್ಮ ಗಳಿಕೆಯ ಬಹುಪಾಲನ್ನು ಈ ರೀತಿ ಪ್ರಯಾಣಕ್ಕಾಗಿ ಕಳೆದುಕೊಳ್ಳುತ್ತಿದ್ದಾರೆ.
ಅದಲ್ಲದೆ ಬಡ ಕೂಲಿ ಕಾರ್ಮಿಕರು, ಸಣ್ಣ ಆದಾಯಕ್ಕೆ ದುಡಿಯುವ ದುಡಿಯುವವರು ಜಲ್ಲಿಗುಡ್ಡೆ ಕ್ರಾಸ್‌ನ ಮುಖ್ಯ ರಸ್ತೆಯವರೆಗೂ ನಡೆದುಕೊಂಡೆ ಹೋಗುವಂತಹ ದಯನೀಯ ಪರಿಸ್ಥಿತಿ ಎದುರಾಗಿದೆ. ರೂಟ್ ನಂಬ್ರ 11ಬಿ ಶ್ರೇಯಮಾಹಿಕ (ವಿವೇಕ), ಸಿಲಿನಾ, ಪಿರೇರಾ (ರೇಡಿಯಂಟ್) ಎಂಬ ಹೆಸರಿನ ಸ್ಟೇಟ್ ಬ್ಯಾಂಕ್‌ನಿಂದ ಜಲ್ಲಿಗುಡ್ಡೆ ನಡುವೆ ಸಂಚರಿಸುವ 3 ಬಸ್ಸುಗಳು ತಮಗೆ ಇಷ್ಟಬಂದಂತೆ ಟ್ರಿಪ್‌ಗಳನ್ನು ಕಡಿತ ಮಾಡುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.
ಇಷ್ಟು ಮಾತ್ರವಲ್ಲದೆ ಈ ಭಾಗದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ಜಿಲ್ಲಾಧಿಕಾರಿಗಳ ಕಚೇರಿಗಳಿದ್ದು ಮಂಗಳೂರು ನಗರದ ವಿವಿಧ ಭಾಗಗಳಿಂದ ಅಗತ್ಯ ಕೆಲಸ ಕಾರ್ಯಗಳಿಗಾಗಿ, ವಿವಿಧ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಬರುವ ಯಾತ್ರಿಕರು ಇಲ್ಲಿನ ಅಗತ್ಯ ಬಸ್ಸು ಸೌಲಭ್ಯ ಇಲ್ಲದೇ ಇರುವ ಕಾರಣಕ್ಕೆ ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣಗೊಂಡಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ನಗರದ ಸ್ಟೇಟ್ ಬ್ಯಾಂಕ್‌ನಿಂದ ಬಜಾಲ್ ಜಲ್ಲಿಗುಡ್ಡೆವರೆಗೂ ಹಾಗೂ ಜಲ್ಲಿಗುಡ್ಡೆಯಿಂದ ಮಂಗಳಾದೇವಿವರೆಗೂ ಸಂಚರಿಸುತ್ತಿದ್ದ ಖಾಸಗಿ ಬಸ್ ಸಂಚಾರ ಸೇವೆಯನ್ನು ಮತ್ತೆ ಪ್ರಾರಂಭಿಸುವಂತೆ ಹಾಗೂ ಆರ್.ಟಿ.ಓ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಓಡದೆ ಟ್ರಿಪ್‌ಕಟ್ ಮಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಾರಿಗೆ ಇಲಾಖೆ ಈ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು. ಹಾಗೂ ಈ ಭಾಗಕ್ಕೆ ಹೆಚ್ಚುವರಿ ಬಸ್ಸು ಸೌಲಭ್ಯ ಒದಗಿಸಲು ಮುಂದಾಗಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐಎಂ ಸ್ಥಳೀಯ ಮುಖಂಡ ಜಯಪ್ರಕಾಶ್ ಜಲ್ಲಿಗುಡ್ಡೆ, ಕಾರ್ಮಿಕ ಸಂಘಟನೆಯ ಮುಖಂಡರಾದ ಕೇಶವ ಚೌಟ, ಮೋಹನ್ ಜಲ್ಲಿಗುಡ್ಡೆ, ಸಾಮಾಜಿಕ ಮುಂದಾಳು ಕಮಲಾಕ್ಷ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.