ಮಂಗಳೂರಿನ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಹಲವು ದಿನಗಳಿಂದ ಕರಾವಳಿ ಜನರನ್ನು ಕಂಗಾಲಾಗಿಸಿದ್ದ ಬಿಸಿಲ ಬೇಗೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಕೇವಲ ಅರ್ಧ ಗಂಟೆ ಸುರಿದ ಮಳೆಗೆ ಕರಾವಳಿಯ ಪ್ರಮುಖ ನಗರವಾದ ಮಂಗಳೂರು ಕೆಲವುಹೊತ್ತು ಸ್ತಬ್ಧಗೊಂಡಿದ್ದು, ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ನಗರದ ಮೂಲಸೌಕರ್ಯಗಳ ವೈಫಲ್ಯ ಮತ್ತೊಮ್ಮೆ ಬಹಿರಂಗಗೊಂಡಿದೆ.
ಜಿಲ್ಲೆಯ ಗ್ರಾಮೀಣ ಹಾಗೂ ಹಸಿರು ವಲಯಗಳಾದ ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ, ಸುಬ್ರಹ್ಮಣ್ಯ, ಕಡಬ ಮತ್ತು ಬಂಟ್ವಾಳ ಪರಿಸರದಲ್ಲಿ ಸಂಜೆ ವೇಳೆಗೆ ಉತ್ತಮ ಮಳೆಯಾದ ವರದಿಯಾಗಿದೆ. ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯಾಗಿದ್ದರಿಂದ ಕೃಷಿಕರಲ್ಲಿ ಹರ್ಷ ಮೂಡಿಸಿದೆ. ಹಲವು ದಿನಗಳ ಸೆಖೆಯಿಂದ ಕಂಗಾಲಾಗಿದ್ದ ಜನರಿಗೆ ಈ ಮಳೆ ತುಸು ನಿರಾಳತೆ ತಂದಿದೆ.
30 ನಿಮಿಷಗಳ ಮಳೆಗೆ ನದಿಯಂತಾದ ಮಂಗಳೂರು ರಸ್ತೆಗಳು
ಮಂಗಳೂರು ನಗರದಲ್ಲಿ ಸುಮಾರು 30 ನಿಮಿಷಗಳ ಕಾಲ ಅಬ್ಬರಿಸಿದ ಗುಡುಗು ಸಹಿತ ಮಳೆಗೆ ಪ್ರಮುಖ ರಸ್ತೆಗಳು ಜಲಾವೃತಗೊಂಡು ಕೆರೆಯಂತಾಗಿದ್ದವು. ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಾದ ಪಂಪ್‌ವೆಲ್, ಕೂಳೂರು, ಕೊಟ್ಟಾರ ಚೌಕಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ, ರಸ್ತೆಯಲ್ಲೇ ನೀರು ನಿಂತಿತ್ತು.
ಕೃತಕ ಪ್ರವಾಹದ ಭೀತಿ:
ಪಂಪ್‌ವೆಲ್ ಫ್ಲೈ ಓವರ್ ಅಡಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೃತಕ ಪ್ರವಾಹದ ಭಯ ಆವರಿಸಿತ್ತು. ಮಳೆನೀರಿನ ಮಟ್ಟ ಹೆಚ್ಚಾದ ಕಾರಣ ದ್ವಿಚಕ್ರ ವಾಹನ ಸವಾರರು ಪ್ರಾಣಭಯದಲ್ಲೇ ಸಂಚರಿಸುವ ದೃಶ್ಯಗಳು ಕಂಡುಬಂದವು. ಇನ್ನು ಕೂಳೂರು ಹೆದ್ದಾರಿಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದರಿಂದ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಕಾಮಗಾರಿ ತಂದ ಸಂಕಷ್ಟ: ಎಲ್ಲೆಡೆ ಟ್ರಾಫಿಕ್ ಜಾಮ್!
ಮಳೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದ ಕೆಪಿಟಿ, ನಂತೂರು, ಪಿವಿಎಸ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿಯ ನಂತೂರು ಮತ್ತು ಪದುವಾ ಸುತ್ತಮುತ್ತ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ, ಮಳೆನೀರು ಮಣ್ಣಿನೊಂದಿಗೆ ಸೇರಿ ಇಡೀ ರಸ್ತೆ ಕೆಸರಾಗಿ ಪರಿವರ್ತನೆಗೊಂಡಿತ್ತು. ಇದು ವಾಹನ ಸವಾರರ, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರ ಸಂಚಾರವನ್ನು ದುಸ್ತರಗೊಳಿಸಿತು. ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು.
ಜೂನ್ 4ರಿಂದ ಮುಂಗಾರು ಅಧಿಕೃತ ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ
ಹವಾಮಾನ ಇಲಾಖೆಯ ವರದಿಗಳ ಪ್ರಕಾರ, ಜೂನ್ 4ರಿಂದ ರಾಜ್ಯಕ್ಕೆ ಮುಂಗಾರು ಮಾರುತಗಳು ಅಧಿಕೃತವಾಗಿ ಪ್ರವೇಶಿಸಲಿವೆ. ಕರಾವಳಿಯ ಒಳನಾಡು ಮತ್ತು ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಮುಂದುವರಿಯಲಿದೆ. ಬುಧವಾರ ತಡರಾತ್ರಿ ಕರಾವಳಿ ತೀರ ಭಾಗಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಸಂಜೆ ಮತ್ತು ರಾತ್ರಿಯ ಅವಧಿಯಲ್ಲಿ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಬಹುದು. ಜೂನ್ 8ರಿಂದ ಕರಾವಳಿಯುದ್ದಕ್ಕೂ ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಪ್ರಸ್ತುತ ಹವಾಮಾನದ ಹಠಾತ್ ಬದಲಾವಣೆ ಹಾಗೂ ಚಲನವಲನಗಳನ್ನು ಗಮನಿಸಿ ಸಾರ್ವಜನಿಕರು ಮತ್ತು ಸಮುದ್ರಕ್ಕೆ ಇಳಿಯುವ ಮೀನುಗಾರರು ಕಡ್ಡಾಯವಾಗಿ ಜಾಗರೂಕರಾಗಿರಲು ಹವಾಮಾನ ಇಲಾಖೆ ಹಾಗೂ ಜಿಲ್ಲಾಡಳಿತ ಜಾಗೃತಿ ಪ್ರಕಟಣೆ ಹೊರಡಿಸಿದೆ.