ನಗರದಲ್ಲಿ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವ

ನಗರದಲ್ಲಿ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವ


ಮಂಗಳೂರು: ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವವು ಶನಿವಾರ ಜೆಪ್ಪುವಿನ ಸಂತ ಅಂತೋನಿ ಆಶ್ರಮ ಹಾಗೂ ಮಿಲಾಗ್ರಿಸ್ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಜರುಗಿತು.


ಮಹೋತ್ಸವದ ಪ್ರಧಾನ ಹಾಗೂ ಸಮಾರೋಪ ದಿವ್ಯ ಬಲಿಪೂಜೆಯು ಸಂಜೆ ಮಿಲಾಗ್ರಿಸ್ ದೇವಾಲಯದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಪ್ರಧಾನ ನೇತ್ರತ್ವದಲ್ಲಿ ನೆರವೇರಿತು.


ತಮ್ಮ ಅರ್ಥಪೂರ್ಣ ಪ್ರವಚನದಲ್ಲಿ ಧರ್ಮಾಧ್ಯಕ್ಷರು, ಕುಟುಂಬವು ನಂಬಿಕೆ ಮತ್ತು ಪ್ರೀತಿಯ ತೊಟ್ಟಿಲು. ಇದು ನಾವು ದೇವರ ಪ್ರೀತಿಯನ್ನು ಅನುಭವಿಸುವ ಮೊದಲ ಮನೆ-ದೇವಾಲಯವಾಗಿದೆ ಎಂದು ವಿವರಿಸಿದರು.


ಸಂತ ಅಂತೋನಿಯವರ ಜೀವನವನ್ನು ಉಲ್ಲೇಖಿಸಿದ ಅವರು, ಸಂತರು ಕೇವಲ ದೈಹಿಕ ಕಾಯಿಲೆಗಳನ್ನಷ್ಟೇ ಅಲ್ಲ, ಪ್ರಾರ್ಥನೆಯ ಶಕ್ತಿಯಿಂದ ಒಡೆದ ಹೃದಯ ಮತ್ತು ಮನಸ್ಸುಗಳನ್ನು ಗುಣಪಡಿಸುತ್ತಾರೆ. ಪ್ರಾರ್ಥನೆ ಮತ್ತು ನಂಬಿಕೆಯ ಜೀವನದ ಮೂಲಕ ನಮ್ಮ ಒಡೆದ ಸಂಬಂಧಗಳನ್ನು ಸರಿಪಡಿಸಲು ಅವರು ನಮಗೆ ಕರೆ ನೀಡುತ್ತಾರೆ. ಕಳೆದುಹೋದ ವಸ್ತುಗಳನ್ನು ಹುಡುಕಿಕೊಡುವ ಸಂತರೆಂದು ಪ್ರಸಿದ್ಧರಾಗಿರುವ ಅಂತೋನಿಯವರು, ‘ನಮ್ಮ ಕುಟುಂಬದಲ್ಲಿ ನಾವು ದೇವರನ್ನು ಕಳೆದುಕೊಂಡಿದ್ದೇವೆಯೇ?’ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ. ಕುಟುಂಬದಲ್ಲಿ ದೇವರನ್ನು ಕಳೆದುಕೊಂಡರೆ, ನಾವು ಎಲ್ಲವನ್ನೂ ಕಳೆದುಕೊಂಡಂತೆ ಎಂದು ಬಿಷಪ್ ಎಚ್ಚರಿಸಿದರು.


ಹಬ್ಬದ ದಿನದ ಇತರ ಧಾರ್ಮಿಕ ವಿಧಿಗಳು ಬೆಳಗ್ಗೆ 6 ಗಂಟೆಗೆ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ವಂ. ಗುರು ಪಾವ್ಲ್ ಮೆಲ್ವಿನ್ ಡಿಸೋಜ (ಕಾಪುಚಿನ್) ಅವರ ನೇತೃತ್ವದ ದಿವ್ಯ ಬಲಿಪೂಜೆಯೊಂದಿಗೆ ಆರಂಭವಾದವು. ಬೆಳಗ್ಗೆ 10.30ಕ್ಕೆ ಕರ್ನಾಟಕ ಪ್ರಾಂತ್ಯದ ಒಸಿಡಿ ಪ್ರಾಂತೀಯ ಮುಖ್ಯಸ್ಥರಾದ ಅತಿ ವಂ. ಗುರು ಜಾನ್ ಸಿಕ್ವೇರಾ ಅವರು ಜೆಪ್ಪು ಆಶ್ರಮದಲ್ಲಿ ಸಂಭ್ರಮದ ದಿವ್ಯ ಬಲಿಪೂಜೆ ನೆರವೇರಿಸಿ, ವೃದ್ಧರು ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಇದೇ ವೇಳೆ, ಮಿಲಾಗ್ರಿಸ್ ದೇವಾಲಯದಲ್ಲಿ ಬೆಳಗ್ಗೆ 8 ಗಂಟೆಗೆ ರೊಸಾರಿಯೋ ಕೆಥೆಡ್ರಲ್‌ನ ರೆಕ್ಟರ್ ಅತಿ ವಂ. ಗುರು ವಾಲೆರಿಯನ್ ಡಿಸೋಜ ಅವರು ಬಲಿಪೂಜೆ ಅರ್ಪಿಸಿದರು. ಸಂಜೆ 4.30ಕ್ಕೆ ಮಲಯಾಳಂ ಭಾಷಿಕ ಭಕ್ತರಿಗಾಗಿ ವಿಶೇಷ ದಿವ್ಯ ಬಲಿಪೂಜೆ ಜರುಗಿತು.


ಬಲಿಪೂಜೆಗಳ ಬಳಿಕ ಸಂತ ಅಂತೋನಿಯವರ ನೊವೆನಾ ಪ್ರಾರ್ಥನೆ ಹಾಗೂ ಪವಿತ್ರ ಅವಶೇಷಗಳ ದರ್ಶನ ಮತ್ತು ಆಶೀರ್ವಾದ ನಡೆಯಿತು. ಮೂರು ದಿನಗಳ ತ್ರಿದುಮ್ ಹಾಗೂ ಪ್ರಧಾನ ಹಬ್ಬದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಆಶ್ರಮದ ನಿರ್ದೇಶಕರಾದ ವಂ. ಜೆ.ಬಿ. ಕ್ರಾಸ್ತಾ ಮತ್ತು ಆಡಳಿತಾಧಿಕಾರಿ ವಂ. ಪ್ರವೀಣ್ ಆಮೃತ್ ಮಾರ್ಟಿಸ್ ಕೃತಜ್ಞತೆ ಸಲ್ಲಿಸಿದರು.



























































Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article