ಕರಾವಳಿಯಲ್ಲಿ ಮಳೆ ಬಿರುಸು: ದಕ್ಷಿಣ ಕನ್ನಡ, ಉಡುಪಿಗೆ ಇಂದು ಯೆಲ್ಲೋ ಅಲರ್ಟ್!
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾನುವಾರ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ ಸೋಮವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಭಾನುವಾರ ಎಲ್ಲೆಲ್ಲಿ ಮಳೆ?
ಭಾನುವಾರ ಬೆಳ್ಳಂಬೆಳಗ್ಗೆಯೇ ಮಂಗಳೂರು ನಗರ, ಉಳ್ಳಾಲ, ಮುಲ್ಕಿ ಸೇರಿದಂತೆ ಜಿಲ್ಲೆಯ ಹಲವೆಡೆ ಬಿರುಸಿನ ಮಳೆ ಆರಂಭವಾಗಿದ್ದು, ಮಧ್ಯಾಹ್ನದವರೆಗೂ ಸುರಿದಿದೆ. ಇನ್ನುಳಿದಂತೆ ಬೆಳ್ತಂಗಡಿ, ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ತಾಲೂಕುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನಪೂರ್ತಿ ಬಿಟ್ಟುಬಿಟ್ಟು ಮಳೆಯಾಗಿದೆ. ಆದರೆ, ಸಂಜೆಯಾಗುತ್ತಿದ್ದಂತೆ ಮೋಡಗಳು ಮರೆಯಾಗಿ, ಕೆಲಕಾಲ ಬಿಸಿಲಿನ ವಾತಾವರಣ ಕಂಡುಬಂದಿತು. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿಯಲ್ಲಿ ಸರಾಸರಿ 14.8 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಲಾದ ಮೂಡುಬಿದಿರೆ 11.5 ಮಿ.ಮೀ ಹಾಗೂ ಸುಳ್ಯದಲ್ಲಿ 12.6 ಮಿ.ಮೀ, ಪುತ್ತೂರಿನಲ್ಲಿ 14.9 ಮಿ.ಮೀ, ಮಂಗಳೂರು 18.6 ಮಿ.ಮೀ, ಬೆಳ್ತಂಗಡಿ 10.6 ಮಿ.ಮಿ, ಕಡಬ 8.1 ಮಿ.ಮಿ, ಬಂಟ್ವಾಳ 9.3 ಮಿ.ಮೀ ಮಳೆಯಾಗಿದೆ.
ಜೂನ್ 20ರವರೆಗೆ ಸಾಮಾನ್ಯ ಮಳೆ ಮುನ್ಸೂಚನೆ:
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮುಂದಿನ ಒಂದೆರಡು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಘಟ್ಟದ ತಳಭಾಗದ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕೊಂಚ ಹೆಚ್ಚಾಗಿರಲಿದೆ. ಜಿಲ್ಲೆಯ ಗ್ರಾಮಿಣ ಬಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಪ್ರಸ್ತುತ ಮುನ್ಸೂಚನೆಗಳ ಪ್ರಕಾರ, ಜೂನ್ 20ರ ತನಕ ಕರಾವಳಿಯುದ್ದಕ್ಕೂ ಇದೇ ರೀತಿಯ ಹವಾಮಾನ ಮುಂದುವರಿಯುವ ಲಕ್ಷಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್‌ನಲ್ಲಿ ಎಲ್ನಿನೋ ತೀವ್ರಗೊಳ್ಳುವ ಆತಂಕ:
ಮತ್ತೊಂದೆಡೆ, ಜಾಗತಿಕ ಹವಾಮಾನ ಬದಲಾವಣೆಯ ಸಂಕೇತವಾಗಿರುವ ಎಲ್ನಿನೋ ಪ್ರಭಾವದ ಕುರಿತೂ ವರದಿಗಳು ಹೊರಬಿದ್ದಿವೆ. ಜೂನ್ ತಿಂಗಳ ಕೊನೆಯ ವಾರದಲ್ಲಿ ಎಲ್ನಿನೋ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದ್ದು, ಇದು ಮುಂಬರುವ ನವೆಂಬರ್ ತಿಂಗಳ ವೇಳೆಗೆ ಮಧ್ಯಮ ತೀವ್ರ ಸ್ವರೂಪ ಪಡೆದುಕೊಳ್ಳುವ ಸೂಚನೆಗಳಿವೆ. ಇದು ಮುಂದಿನ ದಿನಗಳಲ್ಲಿ ಮಳೆಯ ವಿನ್ಯಾಸದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಆತಂಕ ಮೂಡಿಸಿದೆ.