‘ಸ್ಪೀಕರ್‌ಗೆ ಹೈಕಮಾಂಡ್ ಇಲ್ಲ, ನನಗೆ ನಾನೇ ಹೈಕಮಾಂಡ್’: ಯು.ಟಿ. ಖಾದರ್
ಮಂಗಳೂರು: ‘ವಿಧಾನಸಭಾಧ್ಯಕ್ಷರಿಗೆ ಯಾವ ಹೈಕಮಾಂಡ್ ಕೂಡಾ ಇಲ್ಲ. ನನಗೆ ನಾನೇ ಹೈಕಮಾಂಡ್. ಸದ್ಯಕ್ಕೆ ನನಗೆ ಯಾವ ಪಕ್ಷವೂ ಇಲ್ಲ’ ಎಂದು ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಹೇಳಿದ್ದಾರೆ.
ಸಚಿವ ಸ್ಥಾನ ಗಿಟ್ಟಿಸಲು ಪಕ್ಷದ ಹೈಕಮಾಂಡ್ ಭೇಟಿಯಾಗಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ಮುಖ್ಯಮಂತ್ರಿ ಪ್ರಮಾಣ ವಚನ ಸಂದರ್ಭದಲ್ಲಿ ನಾನು ವೇದಿಕೆಯ ಮೇಲೆ ಇರುತ್ತೇನಾ ಅಥವಾ ಕೆಳಗೆ ಇರುತ್ತೇನಾ ಎನ್ನುವುದು ನನಗೇ ಗೊತ್ತಿಲ್ಲ. ಒಂದು ವೇಳೆ ಸ್ಪೀಕರ್ ಆಗಿ ಮುಂದುವರಿದರೆ ಶಿಷ್ಟಾಚಾರದ ಪ್ರಕಾರ ವೇದಿಕೆಯ ಮೇಲೆ ಇರುತ್ತೇನೆ. ಸಚಿವ ಸ್ಥಾನ ಸಿಗುವುದಾದರೆ ಕೆಳಗೆ ಮುಂದಿನ ಸಾಲಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಇರುತ್ತೇನೆ. ಕೇವಲ ಶಾಸಕನಾಗಿದ್ದರೆ ಪ್ರೊಟೊಕಾಲ್ ಎಲ್ಲಿದೆಯೋ ಅಲ್ಲಿರುತ್ತೇನೆ" ಎಂದು ಉತ್ತರಿಸಿದರು.
ಪಕ್ಷದ ತೀರ್ಮಾನಕ್ಕೆ ಬದ್ಧ:
ಈಗ ನಾನು ಸ್ಪೀಕರ್ ಆಗಿ ಪ್ರಾಮಾಣಿಕವಾಗಿ ಹಾಗೂ ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಕಳೆದ ಬಾರಿ ಸರ್ಕಾರ ರಚನೆಯಾಗುವಾಗಲೂ ನನ್ನ ಹೆಸರು ಸಚಿವ ಸ್ಥಾನದ ಮುಂಚೂಣಿಯಲ್ಲಿತ್ತು, ಆದರೆ ಹೈಕಮಾಂಡ್ ಸ್ಪೀಕರ್ ಜವಾಬ್ದಾರಿ ನೀಡಿತು, ನಿರ್ವಹಿಸಿದೆ. ಈ ಬಾರಿ ಏನಾಗುತ್ತದೋ ಗೊತ್ತಿಲ್ಲ. ಹೈಕಮಾಂಡ್ ಮತ್ತು ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಮಾಡಲು ಸಿದ್ಧನಿದ್ದೇನೆ ಎಂದರು.