ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮೋಡ ಕವಿದ ವಾತಾವರಣ: ಸಂಜೆ ಕೆಲವು ಕಡೆ ಉತ್ತಮ ಮಳೆ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಗಳಲ್ಲಿ ಶುಕ್ರವಾರ ದಿನಪೂರ್ತಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಾಧಾರಣ ಮಳೆಯಾಗಿದೆ. ಆದರೆ ಸಂಜೆಯಾಗುತ್ತಿದ್ದಂತೆ ಮಂಗಳೂರು, ಉಳ್ಳಾಲ ಹಾಗೂ ಸುರತ್ಕಲ್ ಸುತ್ತಮುತ್ತಲಿನ ಭಾಗಗಳಲ್ಲಿ ಕೆಲವು ಕಾಲ ಉತ್ತಮ ಮಳೆ ಸುರಿದು ವಾತಾವರಣ ತಂಪಾಗಿಸಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿಯಲ್ಲಿ ಸರಾಸರಿ 10.1 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಲಾದ ಮೂಡುಬಿದಿರೆ 7.5 ಮಿ.ಮೀ ಹಾಗೂ ಸುಳ್ಯದಲ್ಲಿ 9.6 ಮಿ.ಮೀ, ಪುತ್ತೂರಿನಲ್ಲಿ 11.9 ಮಿ.ಮೀ, ಮಂಗಳೂರು 10.7 ಮಿ.ಮೀ, ಬೆಳ್ತಂಗಡಿ 9.6 ಮಿ.ಮಿ, ಕಡಬ 11.3 ಮಿ.ಮಿ, ಬಂಟ್ವಾಳ 9.1 ಮಿ.ಮೀ ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆ:
ಶನಿವಾರ ಕಾಸರಗೋಡಿನ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಇನ್ನುಳಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಹಗುರವಾದ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ತೀರ ಪ್ರದೇಶದಲ್ಲಿ ಗಾಳಿಯ ಒತ್ತಡ ಮತ್ತು ಚಲನೆ ಕಡಿಮೆಯಾದ ಕಾರಣ ಪ್ರಸ್ತುತ ಮಳೆಯ ವಾತಾವರಣ ಸೃಷ್ಟಿಯಾಗಿದೆ. ಮುಂದಿನ 2 ರಿಂದ 3 ದಿನಗಳಲ್ಲಿ ಈ ಸ್ಥಿತಿ ಸಾಮಾನ್ಯಕ್ಕೆ ಮರಳಲಿದ್ದು, ಆ ಬಳಿಕ ಮಳೆ ಕಡಿಮೆಯಾಗುವ ಸಾಧ್ಯತೆಗಳಿವೆ.
10 ದಿನಗಳ ನಂತರ ಮುಂಗಾರು ಪ್ರವೇಶ:
ಕರಾವಳಿ ಜನತೆ ಕಾತರದಿಂದ ಕಾಯುತ್ತಿರುವ ಮುಂಗಾರು ಮಳೆಯ ವಾತಾವರಣವು ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳ ಬಳಿಕ ಗೋಚರಿಸುವ ಸಾಧ್ಯತೆಯಿದೆ. ಅಲ್ಲಿಯವರೆಗೆ ದಿನದ ಹೆಚ್ಚಿನ ಅವಧಿಯಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.