ರಾಮಕೃಷ್ಣ ಮಿಷನ್‌ನಿಂದ ಮರುಬಳಕೆ ನೋಟ್‌ಬುಕ್ ವಿತರಣೆ
ಇತ್ತೀಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅತ್ತಾವರದಲ್ಲಿ ನಡೆದ ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಇಂದಿನ ಸಮಾಜದ ಪ್ರಮುಖ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಬಾಲ್ಯದಿಂದಲೇ ಮಿತವ್ಯಯ, ಮರುಬಳಕೆ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪರಿಸರದ ಬಗ್ಗೆ ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ರೂಪುಗೊಳ್ಳಬಹುದು ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದ ಹಿನ್ನೆಲೆಯಾಗಿ ಸುಮಾರು ಮೂರು ತಿಂಗಳ ಹಿಂದೆ ರಾಮಕೃಷ್ಣ ಮಿಷನ್ ವತಿಯಿಂದ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಭಾಗಶಃ ಬಳಸಲ್ಪಟ್ಟ ಹಳೆಯ ನೋಟ್‌ಬುಕ್‌ಗಳನ್ನು ಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸಂಗ್ರಹಿಸಲಾದ ನೋಟ್‌ಬುಕ್‌ಗಳಲ್ಲಿನ ಬಳಕೆಯಾಗದೆ ಉಳಿದಿದ್ದ ಹಾಳೆಗಳನ್ನು ಪ್ರತ್ಯೇಕಿಸಿ, ರಾಮಕೃಷ್ಣ ಮಿಷನ್‌ನ ಸ್ವಯಂಸೇವಕರು ಅವುಗಳನ್ನು ಮರುಸಂಸ್ಕರಿಸಿ ಹೊಸ ನೋಟ್‌ಬುಕ್‌ಗಳ ರೂಪದಲ್ಲಿ ಸಿದ್ಧಪಡಿಸಿದರು. ಪರಿಸರ ಸಂರಕ್ಷಣೆ ಹಾಗೂ ಸಂಪನ್ಮೂಲಗಳ ಸದ್ಬಳಕೆಯ ಉದ್ದೇಶದಿಂದ ಕೈಗೊಂಡ ಈ ವಿನೂತನ ಉಪಕ್ರಮದಡಿ ಸುಮಾರು 750 ಮರುಬಳಕೆ ನೋಟ್‌ಬುಕ್‌ಗಳನ್ನು ತಯಾರಿಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ತಾವರ, ಪಾಂಡೇಶ್ವರ, ಹೊಯಿಗೆಬಜಾರ್, ಮಣ್ಣಗುಡ್ಡ, ಕುಂಪಲ, ಬೋಳಾರ, ಮಹಾಕಾಳಿಪಡ್ಪು ಹಾಗೂ ಸೂಟರಪೇಟೆ, ಭಗಿನಿ ಸಮಾಜ, ಸೇಂಟ್ ರೀಟಾ ಪ್ರಾಥಮಿಕ ಶಾಲೆ ಮತ್ತು ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಮರುಬಳಕೆ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಿಂದ ಸುಮಾರು 730 ವಿದ್ಯಾರ್ಥಿಗಳು ಪ್ರಯೋಜನ ಪಡೆದರು.