ಜನಸಾಮಾನ್ಯರ ಮೇಲೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ: ಪದ್ಮರಾಜ್ ಆರ್. ಪೂಜಾರಿ

ಜನಸಾಮಾನ್ಯರ ಮೇಲೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ: ಪದ್ಮರಾಜ್ ಆರ್. ಪೂಜಾರಿ


ಮಂಗಳೂರು: ಕೇಂದ್ರ ಸರ್ಕಾರಕ್ಕೆ ದೇಶದಲ್ಲಿರುವ ಜನ ಸಾಮಾನ್ಯರ ಮೇಲೆ ಯಾವುದೇ ಕಾಳಜಿ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.

ಅವರು ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಪೆಟ್ರೋಲ್-ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಸಾಮಾನ್ಯ ಜನರು ಹೊಟೇಲ್‌ಗೆ ಹೋದಲ್ಲಿ ಹೆಚ್ಚುವರಿಯಾಗಿ 10-15 ರೂ. ಹೆಚ್ಚಾಗಿದೆ. ಇದರಲ್ಲಿ ಹೊಟೇಲ್ ಉದ್ಯಮದವರನ್ನು ದೂರುವಂತಿಲ್ಲ. ಜನವರಿಯಲ್ಲಿ ವಾಣಿಜ್ಯ ಗ್ಯಾಸ್ ಬೆಲೆ 1691 ರೂ. ಇದ್ದದ್ದು, ಫೆಬ್ರವರಿಯಲ್ಲಿ 1740 ರೂ.ಗೆ ತಲುಪಿತು. ಮಾರ್ಚ್‌ನಲ್ಲಿ 1883, ಏಪ್ರಿಲ್‌ನಲ್ಲಿ 2191 ರೂ., ಮೇನಲ್ಲಿ 3152, ಜೂನ್‌ನಲ್ಲಿ 3198 ರೂ.ಗೆ ಬಂದು ನಿಂತಿದೆ ಎಂದರು.

ಇಷ್ಟೆಲ್ಲ ಬೆಲೆ ಏರಿಕೆಯಾದರೂ ನಮ್ಮ ಜಿಲ್ಲೆಯ ಸಂಸದರು, ಶಾಸಕರುಗಳು, ರಾಜ್ಯದ ವಿರೋಧಪಕ್ಷ ನಾಯಕರು ಮಾತನಾಡುವುದಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಂದು ಬ್ಯಾರಲ್ ಕ್ರೋಡ್ ಆಯಿಲ್‌ಗೆ 149 ಡಾಲರ್ ಇದ್ದರೂ, ಇಲ್ಲಿ ಪೆಟ್ರೋಲ್‌ಗೆ 66 ರೂ. ಡೀಸೆಲ್‌ಗೆ 54 ರೂ. ಇದ್ದು, ಮೋದಿಯವರು ಪ್ರಧಾನಿಯಾದ ಬಳಿಕ ಕೊರೋನಾ ಸಂದರ್ಭದಲ್ಲಿ ಒಂದು ಬ್ಯಾರಲ್ ಡಾಲರ್‌ಗೆ 23 ಡಾಲರ್‌ಗೆ ಬಂದರೂ ಪೆಟ್ರೋಲ್‌ಬೆಲೆ 90 ರೂ. ಡೀಸೆಲ್ ಬೆಲೆ 102 ರೂ. ಇತ್ತು. ಈಗ ನೋಡಿದರೆ ಮೂರು ಬಾರಿ ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುವುದು ಬಿಟ್ಟರೆ, ಅವರಿಗೆ ದೇಶದ ಸಮಸ್ಯೆ, ಜನರಿಗೆ ಆಗುತ್ತಿರುವ  ಸಮಸ್ಯೆಯ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅದರ ಬಗ್ಗೆ ಅವರುಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಕಳೆದ ಎರಡು ವರ್ಷದಲ್ಲಿ ಜಿಲ್ಲೆಗೆ ಕೇಂದ್ರದಿಂದ ಒಂದೇ ಒಂದು ಯೋಜನೆ ಬಂದಿಲ್ಲ. ನಮ್ಮಿಂದ 100 ರೂ ತೆರಿಗೆ ತೆಗೆದುಕೊಂಡರೆ ಕೇಂದ್ರ ಮರಳಿ 16 ರೂ. ಮಾತ್ರ ನೀಡುತ್ತದೆ. ಇದರ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಕೇಂದ್ರದ ಬೆಲೆ ಏರಿಕೆಯಿಂದ ಜನ ಸಮಾನ್ಯರ ಜೀವನ ಕಷ್ಟವಾಗಿದ್ದು, ರಾಜ್ಯದ ಗ್ಯಾರಂಟಿಯಿಂದ ಬಡವರ, ಆರ್ಥಿಕವಾಗಿ ಹಿಂದುಳಿದವರಿಗೆ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದರು.

ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಪ್ರಕಾಶ್ ಸಾಲಿಯಾನ್, ಸಾಹುಲ್ ಹಮೀದ್ ಕೆ ಕೆ, ಎಸ್ ಅಪ್ಪಿ,  ಶುಭೋದಯ ಆಳ್ವಾ, ಚಿತ್ತಾರಜನ್ ಶೆಟ್ಟಿ ಬೊಂಡಲ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಆತ್ಮಹತ್ಯೆ ಲೆಕ್ಕಕ್ಕೇ ಇಲ್ಲ:

ನೀಟ್ ಪ್ರಶ್ನಪತ್ರಿಕೆ ಸೋರಿಕೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಕೇಂದ್ರ ಸರ್ಕಾರ ಶಾಂತವಾಗಿ ಕೂತು ಏನು ಆಗದಂತೆ ಇದೆ. ಇದೇ ರೀತಿ ಮುಂದುವರಿದಲ್ಲಿ ಯುವಜನತೆ ಧಂಗೆ ಏಳುತ್ತಾರೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article