ಪ್ರೌಢಶಾಲಾ ತರಗತಿಗಳಿಗೆ ಉಪನ್ಯಾಸಕರ ನಿಯೋಜನೆ: ಪ್ರಾಯೋಗಿಕ ಸಮಸ್ಯೆಗಳ ಚರ್ಚೆಗೆ ಆಗ್ರಹ
ಮಂಗಳೂರು: ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಪ್ರೌಢಶಾಲಾ ತರಗತಿಗಳಿಗೆ ನಿಯೋಜಿಸುವ ಸರಕಾರದ ಪ್ರಸ್ತಾವನೆಯನ್ನು ಖಂಡಿಸಿರುವ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಈ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಬೋಧಕ ವರ್ಗದ ಜಂಟಿ ಸಮಿತಿ ರಚಿಸಿ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಧಾರಿಸಬೇಕು ಎಂದು ಒತ್ತಾಯಿಸಿದೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ., ರಾಜ್ಯದಲ್ಲಿ ಎಸ್‌ಇಪಿ ಜಾರಿಯ ಹಂತದಲ್ಲಿ ಈ ರೀತಿಯ ತುರ್ತು ಬದಲಾವಣೆಯ ಅಗತ್ಯವಿಲ್ಲ. ನಿಯಮ ರೂಪಿಸುವ ಮುನ್ನ ಪದವಿ ಪೂರ್ವ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯ ಶೈಕ್ಷಣಿಕ ಮನೋ ವಿಜ್ಞಾನದ ಪರಿಕಲ್ಪನೆಯ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಸರಕಾರಿ, ಅನುದಾನಿತ ಹಾಗೂ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ನೇಮಕಾತಿ ವಿಧಾನ, ಪಠ್ಯಕ್ರಮ ಮತ್ತು ಬೋಧನಾ ಕ್ರಮದಲ್ಲಿ ಏಕರೂಪತೆಯನ್ನು ಖಾತರಿಪಡಿಸಲು ಕ್ರಮ ವಹಿಸಬೇಕು. ಶಿಕ್ಷಣ ವ್ಯವಸೆಯ ಸಂರಚನೆಯನ್ನೇ ಪುನರ್ವಿನ್ಯಾಸ ಮಾಡಿಕೊಳ್ಳದೆ, ಸೀಮಿತವಾದ ಕೆಲಸವೇ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುವ ನಿಯಮ ರೂಪಿಸುವುದು ಏಕರೂಪದ ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿದೆ. ಶಿಕ್ಷಣದಲ್ಲಿ ಬದಲಾವಣೆ, ಸುಧಾರಣೆ ಮಾಡುವ ಸಂದರ್ಭ ಪ್ರಾಥಮಿಕ ಅಥವಾ ಶಿಕ್ಷಣದ ಮೂಲದಿಂದಲೇ ಹಂತ ಹಂತವಾಗಿ ಯಾವುದೇ ನಿಯಮಗಳನ್ನು ಜಾರಿಗೆ ತರುವುದು ಉತ್ತಮ ಮತ್ತು ಅಧಿಕಾರಿ ವರ್ಗಗಗಳ ಉತ್ತರದಾಯಿತ್ವದ ಬಗ್ಗೆ ನಿರ್ಧಾರವಾಗಬೇಕು ಎಂದು ಆಗ್ರಹಿಸಿದರು.
ಸರಕಾರದ ಈ ನಡೆಯಿಂದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಎರಡೂ ಕಡೆ ಪಬ್ಲಿಕ್ ಪರೀಕ್ಷೆಗಳಿಗೆ ಓರ್ವ ಶಿಕ್ಷಕ ವಿದ್ಯಾರ್ಥಿಗಳನ್ನು ತಯಾರಿಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ. ಈ ಎರಡೂ ತರಗತಿಗಳ ಬೋಧನಾ ಕ್ರಮ ಭಿನ್ನವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ನ್ಯಾಯ ನೀಡಲು ಸಾಧ್ಯವಾಗದು. ಪ್ರೌಢಶಾಲೆಯಿಂದ ಅರ್ಹತಾ ಪರೀಕ್ಷೆ ನಡೆಸಿ ಪದವಿ ಪೂರ್ವ ಉನ್ಯಾಸಕರಾಗಿ ಭಡ್ತಿ ನೀಡಲು ನಿರ್ಧರಿಸಿ ಪರೀಕ್ಷೆ ನಡೆಸಲಾಗಿದೆ. ಭಡ್ತಿ ನೀಡಿದ ನಂತರ ಮತ್ತೆ 9 ಮತ್ತು 10ನೆ ತರಗತಿಗೆ ಬೋಧಿಸಲು ಒತ್ತಾಯಿಸಿದರೆ ಭಡ್ತಿಯ ಉದ್ದೇಶವೇ ನಿರರ್ಥಕವಾಗುತ್ತದೆ ಎಂದರು.
ಸರಕಾರವು ತೆಗೆದುಕೊಳ್ಳಲು ಮುಂದಾದ ಪ್ರಸ್ತಾವನೆಯ ಜಾರಿ ಆತುರದ ನಿರ್ಧಾರವಾಗಬಾರದು. ಈ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿದ್ದು, ಸರಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದರೆ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಹರಿಪ್ರಕಾಶ್, ವಿಠಲ, ಸೀನಪ್ಪ, ಸೀಮಾ, ಸಚೇತ್ ಸುವರ್ಣ ಉಪಸ್ಥಿತರಿದ್ದರು.